ನವದೆಹಲಿ: ನವದೆಹಲಿಯಲ್ಲಿ ವಿಶ್ವದ ಅತಿದೊಡ್ಡ ಕೋವಿಡ್ ಆರೈಕೆ ಕೇಂದ್ರ ನಿರ್ಮಿಸಲಾಗಿದ್ದು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಉದ್ಘಾಟಿಸಿದ್ದಾರೆ.
1700 ಅಡಿ ಉದ್ದ, 700 ಅಡಿ ಅಗಲದ ಸುಮಾರು 20 ಪುಟ್ಬಾಲ್ ಮೈದಾನಗಳಷ್ಟು ವಿಸ್ತೀರ್ಣದ ಅತಿ ದೊಡ್ಡ ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಲಾಗಿದೆ. ತಲಾ 50 ಹಾಸಿಗೆಗಳ 200 ಆವರಣ ಒಳಗೊಂಡ ಈ ಕೋವಿಡ್ ಆರೈಕೆ ಕೇಂದ್ರ ವಿಶ್ವದಲ್ಲೇ ಅತಿದೊಡ್ಡ ಕೋವಿಡ್ ಆರೈಕೆ ಕೇಂದ್ರವಾಗಿದೆ.
ಭಾನುವಾರ ದೆಹಲಿಯ ರಾಧಾ ಸೋಮಿ ಸತ್ಸಂಗ್ ಬೇಸ್ ನಲ್ಲಿ 10,000 ಹಾಸಿಗೆಗಳ ಸರ್ದಾರ್ ಪಟೇಲ್ ಕೋವಿಡ್ ಆರೈಕೆ ಕೇಂದ್ರವನ್ನು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಉದ್ಘಾಟಿಸಿದ್ದಾರೆ. ಲಕ್ಷಣ ರಹಿತ ಕೊರೋನಾ ವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡಲು ಛತ್ತರ್ ಪುರದಲ್ಲಿ ಆರೈಕೆ ಕೇಂದ್ರವನ್ನು ಸ್ಥಾಪಿಸಲಾಗಿದೆ.
ರೋಗಲಕ್ಷಣ ವಿಲ್ಲದ ಸೋಂಕಿತರಿಗೆ, ಪ್ರತ್ಯೇಕ ಮನೆವಾಸ ಸಾಧ್ಯವಾಗದವರಿಗೆ ಇಲ್ಲಿ ಚಿಕಿತ್ಸೆ ನೀಡಲಾಗುವುದು. ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಕೇಂದ್ರವನ್ನು ನಿರ್ವಹಿಸುವ ನೋಡಲ್ ಏಜೆನ್ಸಿಯಾಗಿದೆ. ರಾಧಾ ಸೋನಿ ಬಿಆರ್ ಧಾರ್ಮಿಕ ಪಂಥದ ಸ್ವಯಂಸೇವಕರು ಕೇಂದ್ರವನ್ನು ನಿರ್ವಹಿಸಲು ನೆರವಾಗಲಿದ್ದಾರೆ. ದೆಹಲಿ ಸರ್ಕಾರದ ಆಡಳಿತ ಸಹಕಾರದೊಂದಿಗೆ ಆರೈಕೆ ಕೇಂದ್ರ ನಿರ್ಮಾಣ ಮಾಡಲಾಗಿದೆ.