ದೇಶಾದ್ಯಂತ ಕೋವಿಡ್ ಹಬ್ಬುವುದನ್ನು ನಿಯಂತ್ರಿಸಲು ಆರೋಗ್ಯ ಕಾರ್ಯಕರ್ತರು ಹಾಗೂ ಕಾನೂನು ಪಾಲನಾ ಪಡೆಗಳು ಹಗಲಿರುಳು ದಣಿವರಿಯದೇ ಶ್ರಮಿಸುತ್ತಿವೆ. ಜನಸಾಮಾನ್ಯರ ಸುರಕ್ಷತೆಗೆಂದು ಖುದ್ದು ತಮ್ಮ ಆರೋಗ್ಯವನ್ನೇ ಪಣಕ್ಕಿಟ್ಟಿರುವ ಈ ಮಂದಿಯ ಕರ್ತವ್ಯ ಬದ್ಧತೆಗೆ ಏನು ಹೇಳಿದರೂ ಕಡಿಮೆಯೇ.
ಅದರಲ್ಲೂ ಕೆಲವೊಂದು ಸಿಬ್ಬಂದಿ ಈ ವಿಚಾರದಲ್ಲಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗುವ ಮೂಲಕ ತಾವೆಂಥಾ ಕರ್ಮಯೋಗಿಗಳೆಂದು ತೋರಿದ್ದಾರೆ.
ದೆಹಲಿ ಪೊಲೀಸ್‌ನ ಸಹ ಉಪನಿರೀಕ್ಷಕ, 56 ವರ್ಷ ವಯಸ್ಸಿನ ರಾಕೇಶ್ ಕುಮಾರ್ ಅವರು ಕಳೆದ ಕೆಲದಿನಗಳಿಂದ ರಾಜಧಾನಿಯ ಲೋಧಿ ಸ್ಮಶಾನದಲ್ಲಿ ಕೋವಿಡ್‌ನಿಂದ ನಿಧನರಾದ ಮಂದಿಯ ಅಂತಿಮ ಸಂಸ್ಕಾರ ನೆರವೇರಿಸುತ್ತಿದ್ದಾರೆ. ಏಪ್ರಿಲ್ 13ರಿಂದ ರಾಕೇಶ್ ಕುಮಾರರು 1100ಕ್ಕೂ ಹೆಚ್ಚು ದೇಹಗಳಿಗೆ ಅಂತಿಮ ಸಂಸ್ಕಾರ ನೆರವೇರಿಸಿಕೊಟ್ಟಿದ್ದು, 50ಕ್ಕೂ ಹೆಚ್ಚು ದೇಹಗಳಿಗೆ ಖುದ್ದು ತಮ್ಮ ಕೈಯಾರೆ ಮುಕ್ತಿ ನೀಡಿದ್ದಾರೆ. ಹಜರತ್ ನಿಜಾಮುದ್ದೀನ್ ಠಾಣೆಯಲ್ಲಿ ಕೆಲಸ ಮಾಡುವ ಕುಮಾರರು ಮೇ 7ರಂದು ಹಮ್ಮಿಕೊಳ್ಳಲಾಗಿದ್ದ ತಮ್ಮ ಮಗಳ ಮದುವೆಯನ್ನೂ ಮುಂದೂಡಿ ತಮ್ಮೀ ಕೈಂಕರ್ಯದಲ್ಲಿ ಮುಂದುವರೆದಿದ್ದಾರೆ.
ಪಿಪಿಇ ಕಿಟ್ ಧರಿಸಿ ಪತಿ ಮುಂದೆ ಪತ್ನಿ ಮಾಡಿದ್ಲು ಭರ್ಜರಿ ಡಾನ್ಸ್
“ಸುಮಾರು 1100ರಷ್ಟು ಮಂದಿಗೆ ಸಹಾಯ ಮಾಡಿದ್ದೇನೆ. ಸಕಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿರುವ ನಾನು ಲಸಿಕೆಯ ಎರಡೂ ಚುಚ್ಚುಮದ್ದುಗಳನ್ನು ತೆಗೆದುಕೊಂಡಿದ್ದೇನೆ. ಇಲ್ಲಿನ ಜನರಿಗೆ ಸಹಾಯ ಮಾಡಲೆಂದು ನಾನು ನನ್ನ ಮಗಳ ಮದುವೆಯನ್ನು ಮುಂದೂಡಿದ್ದೇನೆ” ಎಂದು ಕುಮಾರ್ ತಿಳಿಸಿದ್ದಾರೆ.
ತಮ್ಮ ಇಲಾಖೆಯ ಕಿರಿಯ ಸಹೋದ್ಯೋಗಿಯ ಬದ್ಧತೆಯನ್ನು ಮೆಚ್ಚಿ ಕೊಂಡಾಡಿರುವ ದೆಹಲಿ ಪೊಲೀಸ್ ಆಯುಕ್ತ ಎಸ್.ಎನ್. ಶ್ರೀವಾಸ್ತವ ರಾಕೇಶ್ ಕುಮಾರರಿಗೊಂದು ಗೌರವದ ಟ್ವೀಟ್ ನಮನ ಸಲ್ಲಿಸಿದ್ದಾರೆ.