ನಮ್ಮ ನಡುವೆ ಎಂಥ ವಿಚಿತ್ರ ಜನರಿರುತ್ತಾರೆ ನೋಡಿ. ಇಲ್ಲೊಬ್ಬ ವ್ಯಕ್ತಿ ತನ್ನ ಸ್ವಂತ ಹತ್ಯೆಗೆ ಸುಪಾರಿ ಕೊಟ್ಟುಕೊಂಡಿದ್ದ ಪ್ರಕರಣ ಬಯಲಾಗಿದೆ.
ದೆಹಲಿಯ ನಿವಾಸಿ ಮೃತ ಉದ್ಯಮಿ ಗೌರವ್ ಅವರು ವ್ಯವಹಾರದಲ್ಲಿ ನಷ್ಟದಿಂದಾಗಿ ಖಿನ್ನತೆಗೆ ಒಳಗಾಗಿದ್ದರು. ಜತೆಗೆ 6 ಲಕ್ಷ ರೂ. ವೈಯಕ್ತಿಕ ಸಾಲವನ್ನೂ ತೆಗೆದುಕೊಂಡಿದ್ದರು. ತಾವು ಸತ್ತರೆ ಕುಟುಂಬಕ್ಕೆ ವಿಮಾ ಹಣ ಸಿಗುತ್ತದೆ, ಸಾಲವೂ ತೀರುತ್ತದೆ ಎಂಬ ಲೆಕ್ಕಾಚಾರದಲ್ಲಿ ತಮ್ಮ ಕೊಲೆಗೆ ತಾವೇ ಸಂಚು ರೂಪಿಸಿಕೊಂಡಿದ್ದಾರೆ.
ಜೂನ್ 9ರಂದು ಮಧ್ಯರಾತ್ರಿ 12.30ರ ಸುಮಾರಿಗೆ ಆನಂದ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಅವರು ಕಾಣೆಯಾದ ದೂರು ಬಂದಿದೆ. ಕಿರಾಣಿ ಅಂಗಡಿ ನಡೆಸುವ ಪತಿ ಪತ್ತೆ ಇಲ್ಲ, ಫೋನ್ ಗೆ ಕೂಡ ಲಭ್ಯರಾಗುತ್ತಿಲ್ಲ ಎಂದು ದೂರಿನಲ್ಲಿ ಆತನ ಪತ್ನಿ ವಿವರಿಸಿದ್ದರು.
ಮರು ದಿನ ಅವರ ಮೃತದೇಹ ಮರಕ್ಕೆ ನೇಣುಹಾಕಿದ ಸ್ಥಿತಿಯಲ್ಲಿ ಸಿಕ್ಕಿದೆ. ತನಿಖೆ ನಡೆಸಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಗುಪ್ತಚರ ತಂಡವು ಮಾಹಿತಿ ಕಲೆಹಾಕಿ ಆರೋಪಿಗಳನ್ನು ಬಂಧಿಸುವಲ್ಲಿ ಸಫಲವಾಯಿತು. ಅದರಲ್ಲಿ ಒಬ್ಬ ಬಾಲಾಪರಾಧಿಯೂ ಇದ್ದ.
ವಿಚಾರಣೆಯ ಸಮಯದಲ್ಲಿ, ಬಾಲಾಪರಾಧಿಯು ಗುಟ್ಟುಬಿಟ್ಟುಕೊಟ್ಟಿದ್ದಾನೆ. ಜತೆಗೆ ನೇಣುಹಾಕಿ ಕೊಲ್ಲಲಾಯಿತು ಎಂದು ಹೇಳಿಕೆ ನೀಡಿದ್ದಾನೆ.
ಗೌರವ್ (ಮೃತ) ಅವರಿಂದ ಈ ಕೃತ್ಯಕ್ಕೆ ಹಣ ಮುಂಚಿತವಾಗಿ ಸ್ವೀಕರಿಸಲಾಗಿದೆ ಎಂದೂ ಆರೋಪಿಗಳು ಬಹಿರಂಗಪಡಿಸಿದ್ದಾರೆ.
ತನ್ನನ್ನು ಕೊಂದು ಹಾಕಿದರೆ ಕುಟುಂಬಕ್ಕೆ ವಿಮಾ ಹಣ ಸಿಗುತ್ತದೆ ಎಂದು ಗೌರವ್ ಹೇಳಿದ್ದರು ಎಂದು ಆರೋಪಿಗಳು ಬಹಿರಂಗಪಡಿಸಿದ್ದಾರೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.