ನನ್ನನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಪತಿ ಕಳೆದುಕೊಂಡ ಎಸಿಪಿ ಹೇಳಿದ್ದೇಕೆ?
ದೆಹಲಿಯ ಎಸಿಪಿಯೊಬ್ಬರ ಪತಿ ಕೋವಿಡ್-19 ನಿಂದ ಮೃತರಾಗಿದ್ದಾರೆ. ಆದರೆ ಈ ಸಾವಿಗೆ ತಾನು ಹೊಣೆ ಎಂದು ಪತ್ನಿ ಮರುಗುತ್ತಿದ್ದಾರೆ. ಸುರೇಂದರ್ ಜಿತ್ ಕೌರ್ ಎಸಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇವರ ಪತಿ ಚರಣ್ ಜಿತ್ ಸಿಂಗ್ ದೆಹಲಿಯ ಆಸ್ಪತ್ರೆಯಲ್ಲಿ ಕೋವಿಡ್ 19ಗೆ ಬಲಿಯಾದರು.
ಈ ಸಾವನ್ನು ಅರಗಿಸಿಕೊಳ್ಳಲಾಗದ ಪತ್ನಿ ಹೇಳಿಕೆಯನ್ನು ನೀಡಿದ್ದು, ನನ್ನ ಪತಿ ಲಾಕ್ಡೌನ್ ಪ್ರಾರಂಭವಾದಾಗಿನಿಂದ ಮನೆ ಹೊರಗೆ ಹೋಗಿರಲಿಲ್ಲ. ಆದರೆ ನಾನು ನನ್ನ ಕೆಲಸದ ಕಾರಣದಿಂದ ಪ್ರತಿ ದಿನ ಹೊರಗೆ ಹೋಗುತ್ತಿದ್ದೆ. ನನ್ನನ್ನು ನಾನು ಎಂದಿಗೂ ಕ್ಷಮಿಸಲು ಸಾಧ್ಯವಾಗುವುದಿಲ್ಲ…..ಎಂದು ಭಾವುಕರಾಗಿ ಹೇಳಿಕೊಂಡಿದ್ದಾರೆ.
ಮೇ 20ರಂದು ಕೌರ್ ಗೆ ಸೋಂಕು ಖಚಿತವಾಗಿತ್ತು. ಬಳಿಕ ಆಕೆಯ ಪತಿಯನ್ನು ಪರೀಕ್ಷೆಗೊಳಪಡಿಸಿದಾಗ ಅವರಿಗೂ ಸೋಂಕು ತಗುಲಿದ್ದು ಖಾತ್ರಿಯಾಗಿತ್ತು. ಅವರ 80 ವರ್ಷದ ತಂದೆಗೂ ಸೋಂಕು ತಗುಲಿತ್ತು. ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೇ 26ರಂದು ಚಿಕಿತ್ಸೆ ಫಲಕಾರಿಯಾಗಿ ಕೌರ್ ಮನೆಗೆ ವಾಪಸಾಗಿದ್ದರು.
ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕೌರ್, ನಾನು ನನ್ನ ಪತಿಯೊಂದಿಗೆ ಮೇ 22ರ ರಾತ್ರಿ ಕೊನೆಯದಾಗಿ ಮಾತನಾಡಿದೆ. ನಾವು ಒಂದೇ ಆಸ್ಪತ್ರೆಯ ಬೇರೆಬೇರೆ ವಾರ್ಡ್ ಗಳಲ್ಲಿ ದಾಖಲಾಗಿದ್ದವು. ನನ್ನ ಪತಿಯನ್ನು ವೆಂಟಿಲೇಟರ್ ವ್ಯವಸ್ಥೆಗೆ ಕರೆದೊಯ್ಯಲಾಯಿತು. ಈ ವೇಳೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದೆ. ಅವರಿಗೆ ಮಾತನಾಡಲು ಕಷ್ಟವಾಗುತ್ತಿತ್ತು. ಮರು ದಿನವೇ ಮೃತರಾದರು. ಈ ಮುನ್ನ ಅವರು ವಾಟ್ಸಾಪ್ ಮೂಲಕ ತಮ್ಮ ಹಣಕಾಸು ವ್ಯವಸ್ಥೆ, ಖಾತೆಗಳು ಎಲ್ಲವನ್ನು ವಿವರಿಸಿದರು. ನಾನು ಇದನ್ನೆಲ್ಲ ಏಕೆ ಹೇಳುತ್ತಿದ್ದೀರಿ ಎಂದು ಪ್ರಶ್ನಿಸಿದ್ದೆ, ಎಲ್ಲವೂ ನಿನಗೆ ತಿಳಿದಿರಬೇಕು ಎಂದು ಹೇಳಿದ್ದರು. ನನ್ನ ನಿವೃತ್ತಿಯ ನಂತರ ಕೆನಡಾದಲ್ಲಿರುವ ಮಗನೊಂದಿಗೆ ಕಳೆಯಲು ನಿರ್ಧರಿಸಿದ್ದೆವು ಎಂದು ಹೇಳಿಕೊಂಡಿದ್ದಾರೆ.