2019ರಲ್ಲಿ ಭಾರತದಲ್ಲಿ ಬರೋಬ್ಬರಿ 1.5 ಲಕ್ಷ ಮಂದಿ ರಸ್ತೆ ಅಪಘಾತದಲ್ಲಿ ಮೃತರಾಗಿದ್ದಾರೆ. ಇದರಲ್ಲಿ 30 ಶೇಕಡಾ ಮಂದಿ ಹೆಲ್ಮೆಟ್ ಧರಿಸದೇ ಪ್ರಾಣ ಕಳೆದುಕೊಂಡಿದ್ರೆ 16 ಪ್ರತಿಶತದಷ್ಟು ಮಂದಿ ಸೀಟ್ ಬೆಲ್ಟ್ ಹಾಕದ ಕಾರಣಕ್ಕೆ ಜೀವ ತೆತ್ತಿದ್ದಾರೆ. ಆದರೆ 2018ಕ್ಕೆ ಹೋಲಿಸಿದ್ರೆ 2019ರಲ್ಲಿ ಮೊಬೈಲ್ ಬಳಕೆ ಮಾಡಿ ಅಪಘಾತಕ್ಕೀಡಾದವರ ಸಂಖ್ಯೆ 33 ಪ್ರತಿಶತದಷ್ಟು ಏರಿಕೆ ಕಂಡಿದೆ ಅಂತಾ ರಸ್ತೆ ಸಾರಿಗೆ ಸಚಿವಾಲಯ ಮಾಹಿತಿ ನೀಡಿದೆ.
ಕಳೆದ ವರ್ಷ 56.136 ಮಂದಿ ಬೈಕ್ ಸವಾರರು ಪ್ರಾಣ ಕಳೆದುಕೊಂಡಿದ್ದು ಇದರಲ್ಲಿ 44,666 ಮಂದಿ ಹೆಲ್ಮೆಟ್ ಧರಿಸದ ಕಾರಣಕ್ಕೆ ಜೀವ ತೆತ್ತಿದ್ದಾರೆ. ಇದರಲ್ಲಿ ಉತ್ತರ ಪ್ರದೇಶ(7,099) ಮೊದಲ ಸ್ಥಾನದಲ್ಲಿದ್ದರೆ. ಮಹಾರಾಷ್ಟ್ರ(5,388) ದ್ವಿತೀಯ ಹಾಗೂ ಮಧ್ಯ ಪ್ರದೇಶ(3,813) ತೃತೀಯ ಸ್ಥಾನದಲ್ಲಿದೆ.
ಸೀಟ್ಬೆಲ್ಟ್ ರಹಿತ ಕಾರು ಚಾಲನೆಯಿಂದ 2019ರಲ್ಲಿ 20,885 ಮಂದಿ ಸಾವಿಗೀಡಾಗಿದ್ದಾರೆ. 2018ಕ್ಕೆ ಹೋಲಿಸಿದ್ರೆ 2019ರಲ್ಲಿ ಸೀಟ್ ಬೆಲ್ಟ್ ಕಾರಣಕ್ಕೆ ಪ್ರಾಣ ಬಿಟ್ಟವರ ಸಂಖ್ಯೆಯಲ್ಲಿ 14.5 ಶೇ. ದಷ್ಟು ಇಳಿಕೆ ಕಂಡು ಬಂದಿದೆ.
ಆದರೆ ರಸ್ತೆ ಅಪಘಾತಕ್ಕೆ ಮುಖ್ಯ ಕಾರಣ ಮೊಬೈಲ್ ಎಂಬುದು ರಸ್ತೆ ಸಾರಿಗೆ ಸಚಿವಾಲಯ ನೀಡಿದ ಮಾಹಿತಿಯಲ್ಲಿ ಬಟಾ ಬಯಲಾಗಿದೆ. 2019ರಲ್ಲಿ ದೇಶದಲ್ಲಿ ಒಟ್ಟು 4,945 ಮಂದಿ ಮೊಬೈಲ್ ಬಳಕೆಯಿಂದ ಅಪಘಾತಕ್ಕೀಡಾಗಿ ಪ್ರಾಣ ಬಿಟ್ಟಿದ್ದಾರೆ. ಇದರಲ್ಲಿ ಉತ್ತರ ಪ್ರದೇಶ(2,630) ಮೊದಲ ಸ್ಥಾನದಲ್ಲಿದೆ.