
ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋದ ಯುವತಿಯೊಬ್ಬಳು ನೀರು ಪಾಲಾಗಿದ್ದಾಳೆ. ಒಡಿಶಾದ ಅನುಪಮಾ ಪ್ರಜಾಪತಿ (27) ಸಾವಿಗೀಡಾದ ದುರ್ದೈವಿ.
ಜನವರಿ 3 ರಂದು ಸುಂದರಘಡದ ಕನಕುಂಡಕ್ಕೆ ಸ್ನೇಹಿತರ ಜೊತೆಗೆ ಪ್ರವಾಸ ತೆರಳಿದ್ದಳು. ನದಿ ತೀರದಲ್ಲಿ ಬಂಡೆ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಕಾಲುಜಾರಿ ನದಿ ಪಾಲಾಗಿದ್ದಾಳೆ. ನೋಡನೋಡುತ್ತಿದ್ದಂತೆಯೇ ಕೊಚ್ಚಿ ಹೋಗಿದ್ದು, ಅಗ್ನಿಶಾಮಕ ಸಿಬ್ಬಂದಿಯು ಇಡೀ ದಿನ ಕಾರ್ಯಾಚರಣೆ ನಡೆಸಿ ಬಂಡೆ ನಡುವೆ ಸಿಲುಕಿದ್ದ ಶವವನ್ನು ಮೇಲೆತ್ತಿದ್ದಾರೆ.
ಇತ್ತೀಚೆಗಷ್ಟೇ 13 ವರ್ಷದ ಒಡಿಶಾದ ಬಾಲಕನೊಬ್ಬ ಕೊರೋನಾ ವಿಶೇಷ ರೈಲಿನಲ್ಲಿ ಪ್ರಯಾಣಿಸುತ್ತಾ ಸೆಲ್ಫಿ ತೆಗೆದುಕೊಳ್ಳಲು ರೈಲಿನ ಮೇಲೇರಿದ್ದ. ಈ ವೇಳೆ ಹೈಟೆನ್ಷನ್ ವೈರ್ ತಗುಲಿ ಸುಟ್ಟು ಹೋಗಿದ್ದ.
2018 ರ ಅಧ್ಯಯನ ವರದಿ ಪ್ರಕಾರ 2011 ರ ಅಕ್ಟೋಬರ್ ನಿಂದ 2017 ರ ನವೆಂಬರ್ ವರೆಗೆ ವಿಶ್ವದಲ್ಲಿ 259 ಮಂದಿ ಸೆಲ್ಫಿ ತೆಗೆದುಕೊಳ್ಳುವಾಗ ಸತ್ತಿದ್ದಾರೆ. ಇದರಲ್ಲಿ ಭಾರತದಲ್ಲೇ ಹೆಚ್ಚು ಸಾವು ಸಂಭವಿಸಿವೆ.