ಮುಂಬೈ: ಹಿಂದು ಸಂಸ್ಕೃತಿಯಂತೆ ಅಂತ್ಯ ಸಂಸ್ಕಾರಕ್ಕೆ ಅವಕಾಶ ಸಿಗದ ಕಾರಣ ಪುತ್ರನೊಬ್ಬ ತನ್ನ ಅಮ್ಮನ ಪ್ರತಿಕೃತಿ ಮಾಡಿ ಅದನ್ನು ದಹಿಸಿ ಅಂತ್ಯಸಂಸ್ಕಾರ ನೆರವೇರಿಸಿದ ವಿಚಿತ್ರ ಘಟನೆ ಮಹಾರಾಷ್ಟ್ರದ ಪಾಲ್‌ಘರ್ ಜಿಲ್ಲೆಯ ವಾಡಾ ತಹಶೀಲ್‌ನ ಅವಂಡೆ ಗ್ರಾಮದಲ್ಲಿ ನಡೆದಿದೆ.
ಫುಲೈ ದಾಬಡೆ ಎಂಬ 65 ವರ್ಷದ ಮಹಿಳೆ ನ.18 ರಂದು ವಯೋ ಸಹಜ ಕಾಯಿಲೆಗಳಿಂದ ಮೃತಪಟ್ಟಿದ್ದರು. ಕೆಲ ವರ್ಷಗಳ ಹಿಂದೆ ಆಕೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದರು. ಅಷ್ಟೇ ಅಲ್ಲ ಆಕೆಯ ಹಿರಿಯ ಮಗ ಮಹಾದು ಹಾಗೂ ಕಿರಿಯ ಮಗ ಸುಧಾನ್ ಕೂಡ ಮತಾಂತರವಾಗಿದ್ದರು. ಆದರೆ, ಹಿರಿಯ ಮಗ ಸುಭಾಷ್ ಹಿಂದು ಧರ್ಮದಲ್ಲೇ ಮುಂದುವರಿದಿದ್ದ. ಮೃತ ತಾಯಿಯ ಅಂತ್ಯಸಂಸ್ಕಾರವನ್ನು ಯಾವ ಧರ್ಮದ ಪದ್ಧತಿಯಂತೆ ಮಾಡಬೇಕು ಎಂಬ ಬಗ್ಗೆ ಇಬ್ಬರು ಮಕ್ಕಳ ನಡುವೆ ವಿವಾದ ನಡೆದಿತ್ತು. ಹಿಂದು ಸಂಪ್ರದಾಯದಂತೆ ಆಗಬೇಕು ಎಂದು ಹಿರಿಯ ಮಗ ಸುಭಾಷ್, ಕ್ರಿಶ್ಚಿಯನ್ ಸಂಪ್ರದಾಯದಂತೆ ಆಗಬೇಕು ಎಂದು ಕಿರಿಯ ಮಗ ಮಹಾದು ಪಟ್ಟು ಹಿಡಿದಿದ್ದರು.
ಇದೇ ವಿಷಯವಾಗಿ ಗ್ರಾಮಸ್ಥರೆಲ್ಲ ಸೇರಿ ದೊಡ್ಡ ಗಲಾಟೆಯ ಹಂತ ತಲುಪಿತ್ತು. ಪೊಲೀಸರು ತೆರಳಿ ರಾಜಿ ಪಂಚಾಯಿತಿ ನಡೆಸಿದರು. ಮಹಿಳೆಯ ಮೃತ ದೇಹವನ್ನು ದ್ವೀಪವೊಂದರಲ್ಲಿ ಹೂಳಲಾಯಿತು. ಆದರೆ, ಹಿರಿಯ ಮಗ ತನ್ನ ತಾಯಿಯ ದೇಹ ದಹನಕ್ಕೆ ಸಿಗದ ಕಾರಣ ಮೂರ್ತಿ ಮಾಡಿ ಅಂತ್ಯಸಂಸ್ಕಾರ ನೆರವೇರಿಸಿದ ಎಂದು ವಾಡಾ ಠಾಣೆಯ ಪಿಎಸ್‌ಐ ದಿಲೀಪ ಪವಾರ್ ತಿಳಿಸಿದ್ದಾರೆ.