ದಕ್ಷಿಣ ಭಾರತದ ಹಲವೆಡೆ ಮುಂಗಾರು ಮಳೆ ಆರಂಭವಾಗಿದೆ. ಆದರೆ, ರಾಜಸ್ತಾನದಲ್ಲಿ ಬಿಸಿ ಗಾಳಿ ಹೆಚ್ಚಾಗಿದೆ.
ಎಷ್ಟರ ಮಟ್ಟಿಗೆ ಬಿಸಿಗಾಳಿ ಇದೆ ಎಂದರೆ, ಜೋಧ್ ಪುರದ ಕೆರೆ, ಕೊಳಗಳಲ್ಲಿನ ಮೀನುಗಳೂ ಅಸುನೀಗುತ್ತಿವೆ. ನೂರಾರು ಮೀನುಗಳು ಸತ್ತು ತೇಲುತ್ತಿವೆ.
ಇದರಿಂದ ಆತಂಕಗೊಂಡಿರುವ ಜನತೆ ಟ್ಯಾಂಕರ್ ಮೂಲಕ ಕೆರೆಗೆ ತಣ್ಣೀರು ಹರಿಸುತ್ತಿದ್ದು, ಉಳಿದಿರುವ ಮೀನುಗಳಾದರೂ ಬದುಕಿಕೊಳ್ಳಲಿ ಎನ್ನುತ್ತಿದ್ದಾರೆ.
ಜೋಧ್ ಪುರದ ಸೋಯಲಾ ಗ್ರಾಮದಲ್ಲಿ ಬಿರುಬೇಸಿಗೆಯ ವಾತಾವರಣ ಇದ್ದು, ಕೆರೆಗಳ ನೀರು ನೆಲಕಚ್ಚುತ್ತಿವೆ. ಮೀನುಗಳ ಮಾರಣಹೋಮ ನಡೆಯುತ್ತಿದೆ.
ಮುಂಗಾರು ಮಳೆ ಬರುವವರೆಗೆ ಕೆರೆಯಲ್ಲಿನ ಮೀನುಗಳನ್ನಾದರೂ ಬದುಕಿಸಿಕೊಳ್ಳೋಣ. ನೀರು ಉಳಿಯುವಂತೆ ಮಾಡೋಣ ಎಂದು ಗ್ರಾಮಸ್ಥರು ನಿರ್ಧರಿಸಿಕೊಂಡಿದ್ದಾರೆ. ತಲಾ 300 ರೂಪಾಯಿ ಸಂಗ್ರಹಿಸಿಕೊಂಡು ಟ್ಯಾಂಕರ್ ಮೂಲಕ ಕೆರೆಗೆ ನೀರು ಹರಿಸಿದ್ದಾರೆ.
ಆಸ್ಪತ್ರೆ, ಅಗ್ನಿಶಾಮಕ ದಳಕ್ಕೂ ನೀರಿನ ಅಭಾವ ತಲೆ ತೋರಿದೆ. ಕೊರೋನಾ ವೈರಾಣು ಹರಡುವಿಕೆ ತಪ್ಪಿಸಲು ಸೋಂಕು ನಿವಾರಕ ಸಿಂಪಡಣೆ, ಶುಚಿ ಕಾರ್ಯಗಳಿಗೂ ನೀರಿಲ್ಲದಂತಾಗಿದೆ.
ಈ ಬಾರಿ ಮುಂಗಾರು ಪ್ರವೇಶವು ವಾಡಿಕೆಗಿಂತ 10 ದಿನ ತಡವಾಗಲಿದೆ ಎಂದು ಅಂದಾಜಿಸಿದ್ದು, ಜೂ.25 ರ ಹೊತ್ತಿಗೆ ರಾಜಸ್ತಾನ ಪ್ರವೇಶಿಸುವ ಸಾಧ್ಯತೆಗಳಿವೆ. ಜು.8 ರ ವೇಳೆಗೆ ಇಡೀ ರಾಜ್ಯ ಆವರಿಸಲಿದ್ದು, ಸೆ.27 ರವರೆಗೆ ಮುಂಗಾರು ಮಾರುತದ ಪರಿಣಾಮ ಇರಲಿದೆ.
ಆದರೆ, ಅಲ್ಲಿವರೆಗೆ ಬಿಸಿಗಾಳಿ ಸಹಿಸಿಕೊಳ್ಳಬೇಕಿದ್ದು, ನೀರಿನ ತತ್ವಾರ ನೀಗಿಸಿಕೊಳ್ಳಬೇಕಿದೆ.