ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ) ಭಾನುವಾರದಂದು ಎರಡು ಕೊರೊನಾ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ನೀಡಿದೆ. ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ತುರ್ತು ಸಂದರ್ಭಗಳಲ್ಲಿ ಈ ಲಸಿಕೆಗಳನ್ನು ಬಳಸಬಹುದಾಗಿದೆ ಎಂದು ಔಷಧ ನಿಯಂತ್ರಣ ಪ್ರಾಧಿಕಾರದ ಮುಖ್ಯಸ್ಥ ವಿ.ಜಿ. ಸೋಮಾನಿ ಹೇಳಿದ್ದಾರೆ. ಈ ಮೂಲಕ ಕೊರೊನಾದಿಂದ ಕಂಗೆಟ್ಟಿದ್ದ ಭಾರತೀಯರಿಗೆ ಒಂದಷ್ಟು ನೆಮ್ಮದಿ ನೀಡಿದ್ದಾರೆ.
ತುರ್ತು ಬಳಕೆಗೆ ಅನುಮೋದನೆಗೆ ಒಳಪಟ್ಟಿರುವ ಈ ಎರಡೂ ಲಸಿಕೆಗಳು ಶೇಕಡಾ 110ರಷ್ಟು ಸುರಕ್ಷಿತ ಎಂದು ಔಷಧ ನಿಯಂತ್ರಣ ಪ್ರಾಧಿಕಾರ ಸ್ಪಷ್ಟಪಡಿಸಿದೆ. ಈಗ ಅನುಮೋದನೆಗೆ ಒಳಪಟ್ಟಿರುವ ಎರಡೂ ಲಸಿಕೆಗಳು ಸಂಪೂರ್ಣವಾಗಿ ದೇಶಿಯ ಎಂಬುದು ವಿಶೇಷ ಸಂಗತಿಯಾಗಿದೆ. ಹೀಗಾಗಿಯೇ ಪ್ರಧಾನಿ ನರೇಂದ್ರ ಮೋದಿ ಅನುಮೋದನೆ ಪಡೆದ ಲಸಿಕೆಗಳು ‘ಮೇಡ್ ಇನ್ ಇಂಡಿಯಾ’ ಎಂಬುದು ಪ್ರತಿಯೊಬ್ಬ ಭಾರತೀಯರು ಹೆಮ್ಮೆ ಪಡುವ ಸಂಗತಿಯಾಗಿದೆ ಎಂದು ಹೇಳಿದ್ದಾರೆ.
ಹೈದರಾಬಾದ್ ನ ಭಾರತ್ ಬಯೋಟೆಕ್ ಸಂಸ್ಥೆಯು ಪುಣೆಯ ಐಸಿಎಂಆರ್ – ಎನ್ಐವಿ ಸಹಕಾರದೊಂದಿಗೆ ‘ಕೊವ್ಯಾಕ್ಸಿನ್’ ಲಸಿಕೆಯನ್ನು ತಯಾರಿಸಿದ್ದು, ಇದರ ಅಧ್ಯಯನದಿಂದ ಹಿಡಿದು ಫಾರ್ಮುಲಾ ಹಾಗೂ ತಯಾರಿವರೆಗೆ ಸಂಪೂರ್ಣವಾಗಿ ಎಲ್ಲಾ ಕಾರ್ಯಗಳು ಭಾರತದಲ್ಲಿ ನಡೆದಿದೆ. ಇನ್ನು ಪುಣೆಯ ಸೀರಂ ಇನ್ಸ್ಟಿಟ್ಯೂಟ್ ತಯಾರಿಸಿರುವ ‘ಕೋವಿಶೀಲ್ಡ್’ ಲಸಿಕೆಗೆ ಆಕ್ಸ್ಫರ್ಡ್ ವಿವಿ ಮತ್ತು ಸ್ವೀಡನ್ ನ ಆಸ್ಟ್ರಾಝೆನೆಕಾ ಸಂಸ್ಥೆಗಳ ಸಹಯೋಗವಿದ್ದರೂ ಸಹ ಪರೀಕ್ಷೆಯಿಂದ ಹಿಡಿದು ತಯಾರಿವರೆಗೆ ಎಲ್ಲ ಪ್ರಯೋಗಗಳು ಭಾರತದಲ್ಲಿ ನಡೆದಿದೆ.