ಕೇರಳದ ಮಹಾತ್ಮಾ ಗಾಂಧಿ ವಿವಿಯ ಅಂತಿಮ ವರ್ಷದ ಬಿಎ ಪರೀಕ್ಷೆಯಲ್ಲಿ ಬಿಹಾರದ ಶೇಖ್‌ಪುರಾ ಜಿಲ್ಲೆಯ ಗೋಸಾಯ್‌ಮಾಧಿ ಗ್ರಾಮದ ವಲಸೆ ಕಾರ್ಮಿಕರೊಬ್ಬರ ಮಗಳಾದ ಪಾಯಲ್ ಕುಮಾರಿ ಮೊದಲ ರ‍್ಯಾಂಕ್ ಪಡೆದುಕೊಂಡಿದ್ದಾರೆ.
ಪಾಯಲ್ ತಂದೆ ಪ್ರಮೋದ್ ಕುಮಾರ್ ಸಿಂಗ್ ತಮ್ಮ ಕುಟುಂಬದೊಂದಿಗೆ ಬಿಹಾರವನ್ನು ಬಿಟ್ಟು ಹೋಗಿ ಎರ್ನಾಕುಲಂನಲ್ಲಿ ಹಾರ್ಡ್‌ವೇರ್ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾರೆ.
ಹತ್ತನೇ ತರಗತಿಯಲ್ಲಿ 83%ನೊಂದಿಗೆ ಪಾಸ್ ಆಗಿದ್ದ ಪಾಯಲ್, 12ನೇ ತರಗತಿಯಲ್ಲಿ ಕಲಾಶಾಸ್ತ್ರ ವಿಭಾಗದಲ್ಲಿ 95% ಅಂಕಗಳೊಂದಿಗೆ ಪಾಸ್ ಆಗಿದ್ದರು. ಇಲ್ಲಿನ ಮಾರ್ ಥಾಮಾ ಮಹಿಳಾ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಲು 2017ರಲ್ಲಿ ದಾಖಲಾದ ಪಾಯಲ್ ತಮ್ಮ ಅಂತಿಮ ವರ್ಷದ ವ್ಯಾಸಂಗವನ್ನು ಭರ್ಜರಿಯಾಗಿ ಮುಗಿಸಿದ್ದಾರೆ. ಪಾಯಲ್ ಸಾಧನೆಗೆ ತನ್ನ ಕುಟುಂಬದ ಆರ್ಥಿಕ ಮುಗ್ಗಟ್ಟು ಅಡ್ಡಿ ಬಂದಿತ್ತಾದರೂ ಅದರ ನಡುವೆಯೂ ಅಪೂರ್ವ ಯಶಸ್ಸು ಗಳಿಸಿದ್ದಾರೆ.