ಶವಾಗಾರದಲ್ಲಿದ್ದ ಶವ ನಾಪತ್ತೆಯಾದ ನಂತ್ರ ಮುಂಬೈ ಸಿಯಾನ್ ಆಸ್ಪತ್ರೆ ಶವಾಗಾರದ ಇಬ್ಬರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. 28 ವರ್ಷದ ಅಂಕುಶ್ ಸುರ್ವಾಡೆ, ಭಾನುವಾರ ಸಾವನ್ನಪ್ಪಿದ್ದಾನೆ. ಆದ್ರೆ ಆಸ್ಪತ್ರೆಯ ಶವಾಗಾರದಲ್ಲಿ ಆತನ ಶವವಿಲ್ಲ.
ಒಂದು ತಿಂಗಳ ಹಿಂದೆ ಬೈಕ್ ನಿಂದ ಬಿದ್ದು ಅಂಕುಶ್ ತಲೆಗೆ ಪೆಟ್ಟಾಗಿತ್ತು. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ಆತ ಸಾವನ್ನಪ್ಪಿದ್ದಾನೆ. ಒಪ್ಪಿಗೆಯಿಲ್ಲದೆ ಆಸ್ಪತ್ರೆ ಸಿಬ್ಬಂದಿ ಕಿಡ್ನಿ ತೆಗೆದಿದ್ದಾರೆಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಹಾಗೆ ಶವವನ್ನು ಬೇರೆ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆಂಬ ಶಂಕೆ ವ್ಯಕ್ತಪಡಿಸಿದ್ದಾರೆ.
ಮೊದಲು ಅಂಕುಶ್ ಶವವನ್ನು ಕುಟುಂಬಸ್ಥರಿಗೆ ನೀಡಲಾಗಿತ್ತಂತೆ. ಅಂಕುಶ್ ಕಿಬ್ಬೊಟ್ಟೆ ಭಾಗದಲ್ಲಿ ಹೊಲಿಗೆ ಕಲೆಯಿದ್ದ ಕಾರಣ ಕುಟುಂಬಸ್ಥರು ಮರಣೋತ್ತರ ಪರೀಕ್ಷೆಗೆ ಆಗ್ರಹಿಸಿದ್ದರಂತೆ. ಮರಣೋತ್ತರ ಪರೀಕ್ಷೆ ನಂತ್ರ, ಅಂತಿಮ ತಯಾರಿಗೆ ಸಮಯ ಕೋರಿ ಶವವನ್ನು ಶವಾಗಾರದಲ್ಲಿಡಲು ಸೂಚಿಸಿದ್ದರಂತೆ.
ಸಂಜೆ 5 ಗಂಟೆಗೆ ಶವ ಕೇಳಲು ಬಂದವರಿಗೆ ಆಸ್ಪತ್ರೆ ಸಿಬ್ಬಂದಿ ಬೇರೆ ಶವ ತೋರಿಸಿದೆ. ಶವಾಗಾರದಲ್ಲೂ ಅಂಕುಶ್ ಶವವಿರಲಿಲ್ಲ. 4 ಗಂಟೆ ಸುಮಾರಿಗೆ ದಂಪತಿ ಒಂದು ಶವವನ್ನು ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಿದ್ದಾರಂತೆ. ಅದು ಅಂಕುಶ್ ದೇಹವಾಗಿತ್ತೆಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.