ನಿವಾರ್ ಚಂಡಮಾರುತ ದಕ್ಷಿಣ ಭಾರತಕ್ಕೆ ಬಂದಪ್ಪಳಿಸಿ ಕೇವಲ ಒಂದು ವಾರದ ಬಳಿಕ ಇನ್ನೊಂದು ಚಂಡಮಾರುತ ತಮಿಳುನಾಡನ್ನ ಅಪ್ಪಳಿಸುವ ಸಾಧ್ಯತೆ ಇದೆ.
ಡಿಸೆಂಬರ್ ನಾಲ್ಕರಂದು ಈ ಹೊಸ ಚಂಡಮಾರುತ ಬಂದಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮಂಗಳವಾರ ತಡರಾತ್ರಿ ವೇಳೆಗೆ ಬಂಗಾಳಕೊಲ್ಲಿಯಲ್ಲಿನ ಚಂಡಮಾರುತ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಹೇಳಿದ್ದಾರೆ.
ಡಿಸೆಂಬರ್ 2ರ ಸಂಜೆ ಅಥವಾ ರಾತ್ರಿ ಸಮಯದಲ್ಲಿ ಶ್ರೀಲಂಕಾ ಕರಾವಳಿ ಭಾಗದಲ್ಲಿ ಗಂಟೆಗೆ 75-85 ಕಿಲೋಮೀಟರ್ ವೇಗದಲ್ಲಿ ಚಲಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಈ ಚಂಡಮಾರುತ ಪಶ್ಚಿಮ ದಿಕ್ಕಿನಲ್ಲಿ ಚಲಿಸುವ ಸಾಧ್ಯತೆ ಇದೆ. ಡಿಸೆಂಬರ್ 3ರಂದು ಮನ್ನಾರ್ ಕೊಲ್ಲಿ ಹಾಗೂ ಪಕ್ಕದ ಕೊಮೊರಿನ್ ಪ್ರದೇಶಕ್ಕೆ ಹೋಗಲಿದೆ. ಇದಾದ ಬಳಿಕ ಈ ಚಂಡಮಾರುತ ಪಶ್ಚಿಮ ನೈಋತ್ಯ ದಿಕ್ಕಿನಲ್ಲಿ ಚಲಿಸಲಿದೆ. ತಮಿಳುನಾಡಿನ ಕರಾವಳಿ ಭಾಗ ಕನ್ಯಾಕುಮಾರಿ ಹಾಗೂ ಪಂಬನ್ ನಡುವೆ ಡಿಸೆಂಬರ್ 4ರಂದು ಚಂಡಮಾರುತ ಅಪ್ಪಳಿಸಲಿದೆ ಎಂದು ಮಾಹಿತಿ ನೀಡಲಾಗಿದೆ.