ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡುವ ಪರಿಪಾಠಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಸೈಬರಾಬಾದ್ ಸಂಚಾರಿ ಪೊಲೀಸರು ಹೊಸ ನಿಯಮವೊಂದನ್ನು ತಂದಿದ್ದಾರೆ.
ಹೆಲ್ಮೆಟ್ ಇಲ್ಲದ ಸವಾರರಿಗೆ ಭಾರೀ ದಂಡ ಹಾಕುವ ಬದಲಿಗೆ ಅವರ ಬೈಕ್‌ಗಳನ್ನೇ ವಶಕ್ಕೆ ಪಡೆಯಲು ನಿರ್ಧರಿಸಲಾಗಿದೆ. ಇಂಥ ಸವಾರರನ್ನು ಅಡ್ಡಗಟ್ಟಿ ಬೈಕ್ ಕಿತ್ತುಕೊಳ್ಳಲಿರುವ ಪೊಲೀಸರು, ಹೆಲ್ಮೆಟ್ ಅನ್ನು ತಂದ ಬಳಿಕವಷ್ಟೇ ಅವರ ಬೈಕ್‌ಗಳನ್ನು ಮರಳಿ ಕೊಡಲಿದ್ದಾರೆ.
ಇದಕ್ಕೆಂದೇ ಸಗರದ ಏಳು ಕಡೆಗಳಲ್ಲಿ ವಿಶೇಷ ಚೆಕ್‌ಪೋಸ್ಟ್‌ಗಳನ್ನು ಅಳವಡಿಸಲಾಗಿದ್ದು, 24 ಗಂಟೆಗಳ ಕಾಲ ಪಹರೆ ಕಾಯುವ ವ್ಯವಸ್ಥೆ ಮಾಡಲಾಗಿದೆ.
ಈ ಬಗ್ಗೆ ಮಾತನಾಡಿದ ಸೈಬರಾಬಾದ್ ಸಂಚಾರಿ ಪೊಲೀಸ್ ವಿಭಾಗದ ಡಿಸಿಪಿ ಎಸ್.ಎಂ. ಕುಮಾರ್, “ಫೋಟೋಗಳನ್ನು ತೆಗೆದು ದಂಡ ಕಟ್ಟಲು ನೋಟಿಸ್ ಕಳುಹಿಸುವುದು, ವಾಹನಗಳನ್ನು ತಡೆಗಟ್ಟಿ ಚಲನ್ ಬರೆಯುವುದರಿಂದ ಪ್ರಾಣಗಳನ್ನು ಉಳಿಸಲು ಆಗದು. ಏಳು ಚೆಕ್‌ಪೋಸ್ಟ್‌ಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳು ಹೆಲ್ಮೆಟ್ ಧರಿಸದೇ ಇರುವ ಸವಾರರ ವಾಹನಗಳನ್ನು ವಶಕ್ಕೆ ಪಡೆದು, ಅವರು ಹೆಲ್ಮೆಟ್ ಧರಿಸಿ ಮರಳಿದ ಬಳಿಕ ವಾಹನಗಳನ್ನು ಮರಳಿ ನೀಡಲಿದ್ದಾರೆ” ಎಂದು ತಿಳಿಸಿದ್ದಾರೆ.