ಮುಂಬೈ: ಸಬ್ ಅರ್ಬನ್ ಟ್ರೈನ್ ಹತ್ತಲು ಜನಜಂಗುಳಿ ಉಂಟಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳದ ಬಗ್ಗೆ ಟೀಕೆ ವ್ಯಕ್ತವಾಗಿದ್ದು, ಜನಜಂಗುಳಿಯಾಗಿದ್ದೇಕೆ ಎಂದು ಆಡಳಿತ ಸ್ಪಷ್ಟನೆ ನೀಡಿದೆ.
ಆಗಲೇ ತುಂಬಿದ ರೈಲನ್ನು ಹತ್ತಲು ಪ್ರಯಾಣಿಕರು ಹರಸಾಹಸ ಪಡುತ್ತಿರುವ ಒಂದು ವಿಡಿಯೋ ಹಾಗೂ ಮಹಿಳಾ ಬೋಗಿಯಲ್ಲಿ ಮತ್ತು ಅಂಗವಿಕಲರ ಮೀಸಲು ಸ್ಥಳದಲ್ಲಿ ಜನ ಇರುವುದು ಇನ್ನೊಂದು ವಿಡಿಯೋದಲ್ಲಿದೆ. ಇಂಥ ಜನಜಂಗುಳಿಯು ರಾಜ್ಯ ಹಾಗೂ ದೇಶದಲ್ಲಿ ಕೋವಿಡ್ ವ್ಯಾಪಕವಾಗಿ ಹರಡಲು ಕಾರಣವಾಗುತ್ತದೆ ಎಂದು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.
“ಅಚ್ಚರಿ ಪಡಬೇಕಿಲ್ಲ ಮುಂಬೈ ಕೊರೋನಾದಿಂದ ತುಂಬಿ ಹೋಗಲಿದೆ” ಎಂದು ಒಬ್ಬರು, “ಇಂಥ ಅವಿವೇಕತನವನ್ನು ನಾನು ಭಾರತೀಯರಿಂದ ನಿರೀಕ್ಷಿಸಿದ್ದೆ. ಮುಂಬೈನಲ್ಲಿ ಕೊರೊನಾ ಪ್ರಕರಣಗಳು ಗರಿಷ್ಠ ಮಿತಿ ತಲುಪಿವೆ. ಕೊರೊನಾ ಸಾವು ನಮ್ಮ ಹೆಡ್ಡತನವನ್ನು ತೋರಿಸುತ್ತದೆ” ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇದೇ ರೀತಿ ಸಾವಿರಾರು ಕಮೆಂಟ್ ಗಳು ಬಂದಿವೆ.