ಭೋಪಾಲ್: ಕೊರೊನಾ ವೈರಸ್ ಲಾಕ್‌ಡೌನ್ ನ ವಿಪರ್ಯಾಸ ನೋಡಿ, ಮನುಷ್ಯರಿಗೆ ಮನೆಯಲ್ಲಿರುವಂತೆ ಸಲಹೆ ನೀಡಲಾಗುತ್ತಿದೆ. ಆದರೆ, ಕಾಡು ಪ್ರಾಣಿಗಳು ಬೀದಿಯಲ್ಲಿ ತಿರುಗುತ್ತಿವೆ. ಇತ್ತೀಚೆಗೆ ಮಧ್ಯ ಪ್ರದೇಶದ ಶಿವಪುರಿ ಪ್ರದೇಶ ರಸ್ತೆಯಲ್ಲಿ ಮೊಸಳೆ ರಾಜಾರೋಷವಾಗಿ ಓಡಾಡುತ್ತಿರುವುದು ಪತ್ತೆಯಾಗಿದೆ.
ಸುಮಾರು 10 ಅಡಿ ಉದ್ದದ ಮೊಸಳೆ ಓಡಾಡುತ್ತಿರುವುದನ್ನು ಸುತ್ತಲಿನ ಗ್ರಾಮಸ್ಥರು ಗುರುತಿಸಿದ್ದಾರೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಅರಣ್ಯ ಅಧಿಕಾರಿಗಳು ಮೊಸಳೆಯನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಸಂದೇಶ್ ಶೇಟ್ ಎಂಬುವವರು ವಿಡಿಯೋವನ್ನು ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿದ್ದು, ಉದ್ಯಮಿ ಆನಂದ ಮಹಿಂದ್ರಾ ಹಾಗೂ ಐಎಫ್ಎಸ್ ಅಧಿಕಾರಿ ಸುಶಾಂತ ನಂದಾ ಅವರಿಗೆ ಟ್ಯಾಗ್ ಮಾಡಿದ್ದಾರೆ.
ಮೊಸಳೆ ಕೆಲವು ಗಿಡ ಗಂಟಿಗಳ ಸಂದಿನಿಂದ ಹೊರ ಬಿದ್ದು ರಸ್ತೆಯನ್ನು ನಿಧಾನಕ್ಕೆ ದಾಟಿ ಇನ್ನೊಂದು ದಿಕ್ಕಿಗೆ ಚಲಿಸುತ್ತದೆ. ರಸ್ತೆ ಸಂಚಾರ ತಡೆದು ಜನ ವೀಕ್ಷಿಸುತ್ತಿರುವ ದೃಶ್ಯ ವಿಡಿಯೋದಲ್ಲಿದೆ.