ಲಖಿಮ್ ಪುರ: ಅಳಿವಿನ ಅಂಚಿನಲ್ಲಿರುವ ಅಪರೂಪದ ಆರ್ಕಿಡ್ ಸಸ್ಯವೊಂದು ಉತ್ತರ ಪ್ರದೇಶದ ದುದ್ವಾ ಸಂರಕ್ಷಿತ ಅಭಯಾರಣ್ಯದಲ್ಲಿ ಪತ್ತೆಯಾಗಿದೆ. ಸುಮಾರು 118 ವರ್ಷಗಳ ನಂತರ ಎಲೋಪಿಯಾ ಆಪ್ಟಸ್ ಎಂಬ ಸಸ್ಯವನ್ನು ಮತ್ತೆ ಗುರುತಿಸಲಾಗಿದ್ದು, ತಳಿ ಸಂವರ್ಧನೆ ಮಾಡಿ ವಾಣಿಜ್ಯಿಕವಾಗಿ ಬೆಳೆಸುವ ನಿರೀಕ್ಷೆ ಮೂಡಿದೆ.
ಹೂವು ಹಾಗೂ ಕಾಯಿ ಬಿಡುವ ಆರ್ಕಿಡ್ ಸಸ್ಯ ಇದಾಗಿದೆ. ಇದುವರೆಗೂ ಇದರ ಹಣ್ಣು ಮತ್ತು ಬೀಜಗಳನ್ನು ಯಾರೂ ಗುರುತಿಸಿ ಫೋಟೋ ತೆಗೆದು ದಾಖಲಿಸಿರಲಿಲ್ಲ. ಇಂಟರ್ ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್(ಐಯುಸಿಎನ್) ನಿಂದ ಅಳಿವಿನಂಚಿನಲ್ಲಿರುವ ಸಸ್ಯ ಎಂದು ಇದನ್ನು ಗುರುತಿಸಲಾಗಿದೆ.
ಈ ಸಸ್ಯವನ್ನು ದುದ್ವಾ ಅರಣ್ಯದಲ್ಲಿ ಗುರುತಿಸಿ ಫೋಟೋ ತೆಗೆಯಲಾಗಿತ್ತು. ಜರ್ಮನಿಯಲ್ಲಿರುವ ಬಾಂಗ್ಲಾದೇಶ ಮೂಲದ ಸಸ್ಯ ಶಾಸ್ತ್ರಜ್ಞ ಮೊಹಮದ್ ಶರೀಫ್ ಹಸನ್ ಈ ಸಸ್ಯದ ಬಗ್ಗೆ ಮನೋಜ್ ಪಾಠಕ್ ಅವರಿಗೆ ಮಾಹಿತಿ ನೀಡಿದ್ದರು. ಅವರು ಆಗಮಿಸಿ ಆರ್ಕಿಡ್ ನ ಹಣ್ಣು ಹಾಗೂ ಬೀಜಗಳನ್ನು ಗುರುತಿಸಿ ದಾಖಲಿಸಿದ್ದಾರೆ.
“ಅತಿ ವಿರಳ ಸಸ್ಯ ಇದಾಗಿದ್ದು, ಬಾಂಗ್ಲಾದೇಶದಲ್ಲೂ ಇದರ ಹಣ್ಣು, ಬೀಜ ಪತ್ತೆಯಾಗಿಲ್ಲ. ಭಾರತೀಯ ಸಸ್ಯ ಶಾಸ್ತ್ರಜ್ಞರು ಇದನ್ನು ಗುರುತಿಸಿ ಸಂರಕ್ಷಿಸುವ ಕೆಲಸ ಮಾಡಬೇಕು” ಎಂದು ಹಸನ್ ಅಭಿಪ್ರಾಯಪಟ್ಟಿದ್ದಾಗಿ ಮನೋಜ್ ಪಾಠಕ್ ತಿಳಿಸಿದ್ದಾರೆ.