ಗಂಭೀರ ಸ್ಥಿತಿಯಲ್ಲಿದ್ದ ಕೊರೊನಾ ಸೋಂಕಿತ 7 ತಿಂಗಳ ಗರ್ಭಿಣಿ ಸುರಕ್ಷಿತವಾಗಿ ಮಗುವಿಗೆ ಜನ್ಮ ನೀಡಿದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ ಪಟ್ಟಣದ ಆಸ್ಪತ್ರೆಯಲ್ಲಿ ನಡೆದಿದೆ.
37 ವರ್ಷದ ಸೋಂಕಿತ ಗರ್ಭಿಣಿಯನ್ನ ಕೋವಿಡ್ ಐಸಿಯುವಿನಲ್ಲಿ ಇಡಲಾಗಿತ್ತು. ಈ ಗರ್ಭಿಣಿಯಲ್ಲಿ ಆಮ್ಲಜನಕದ ಪ್ರಮಾಣದಲ್ಲಿ ಕೊರತೆ ಇತ್ತು ಎಂದು ಕೆಡಿಎಂಸಿ ವಕ್ತಾರ ಮಾಹಿತಿ ನೀಡಿದ್ರು.
ಈ ಸೋಂಕಿತೆ ಸಾಮಾನ್ಯ ಹೆರಿಗೆ ಮೂಲಕ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ.
ಕೆಡಿಎಂಸಿ ಅಡಿಯಲ್ಲಿ ಬರುವ ಕೋವಿಡ್ ಆಸ್ಪತ್ರೆಯಲ್ಲಿ ಇದೇ ಮೊದಲ ಬಾರಿಗೆ ಕೊರೊನಾ ಸೋಂಕಿತ ಗರ್ಭಿಣಿ ಸಾಮಾನ್ಯ ಹೆರಿಗೆ ಮೂಲಕ ಮಗುವಿಗೆ ಜನ್ಮ ನೀಡಿದ ಪ್ರಕರಣ ಇದಾಗಿದೆ.
ಮಗುವಿನ ತೂಕ ಕಡಿಮೆ ಇರುವ ಕಾರಣ ಅದನ್ನು ಖಾಸಗಿ ಆಸ್ಪತ್ರೆಯ ಎನ್ಐಸಿಯುವಿನಲ್ಲಿ ಇಡಲಾಗಿದೆ. ತಾಯಿ ಹಾಗೂ ಮಗುವಿನ ಆರೋಗ್ಯ ಸುಧಾರಿಸುತ್ತಿದೆ ಎಂದು ಆಸ್ಪತ್ರೆ ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.