ಹೈನುಗಾರಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಬಡ ಪೋಷಕರ ಮಗಳು ಸೋನಾಲ್ ರಾಜಸ್ಥಾನದಲ್ಲಿ ನ್ಯಾಯಾಧೀಶೆ ಸ್ಥಾನವನ್ನ ಅಲಂಕರಿಸೋಕೆ ಸಜ್ಜಾಗಿದ್ದಾರೆ.
2018ರಲ್ಲಿ ಆರ್ಜೆಎಎಸ್ ಪರೀಕ್ಷೆ ಪಾಸ್ ಮಾಡಿದ್ದ ಸೋನಾಲ್ ತರಬೇತಿ ಪೂರ್ಣಗೊಳಿಸಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಜಡ್ಜ್ ಆಗಲಿದ್ದಾರೆ.
26 ವರ್ಷದ ಸೋನಾಲ್ ಎಲ್ಎಲ್ಬಿ ಹಾಗೂ ಎಲ್ಎಲ್ಎಂ ಪರೀಕ್ಷೆಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. ಇದಾದ ಬಳಿಕ ಒಂದು ವರ್ಷಗಳ ತರಬೇತಿ ಪೂರ್ಣಗೊಳಿಸಿದ ಸೋನಾಲ್ ರಾಜಸ್ಥಾನದ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಆಗಿ ನೇಮಕಗೊಳ್ಳಲಿದ್ದಾರೆ.
ತಂದೆ ಲಾಲ್ ಶರ್ಮಾರ ಹೈನೋದ್ಯಮಕ್ಕೂ ಸಹಾಯ ಮಾಡೋ ಸೋನಾಲ್, ಪದವೀಧರೆಯಾಗಿದ್ದರೂ ಸಹ ಬೆಳಗ್ಗೆ 4 ಗಂಟೆಗೇ ಎದ್ದು ಹಸುವಿನ ಹಾಲು ಕರೆಯೋದು, ಕೊಟ್ಟಿಗೆ ಸ್ವಚ್ಛಗೊಳಿಸೋದು, ಸಗಣಿ ಸಂಗ್ರಹಿಸೋದು ಜೊತೆಗೆ ಮನೆ ಮನೆಗೆ ತೆರಳಿ ಹಾಲನ್ನೂ ನೀಡುತ್ತಾರೆ.
ಕಳೆದ ವರ್ಷ ಡಿಸೆಂಬರ್ನಲ್ಲೇ ಫಲಿತಾಂಶ ಘೋಷಣೆಯಾಗಿತ್ತು. ಆದರೆ ಸೋನಾಲ್ ಕಟ್ ಆಫ್ ಅಂಕಕ್ಕಿಂತ 1 ಅಂಕ ಕಡಿಮೆ ಪಡೆದ ಕಾರಣ ವೇಟಿಂಗ್ ಲಿಸ್ಟ್ನಲ್ಲಿದ್ದರು. ಆದರೆ ಆಯ್ಕೆಯಾದ ಕೆಲ ವಿದ್ಯಾರ್ಥಿಗಳು ಸೇವೆಗೆ ನೇಮಕವಾಗದ ಕಾರಣ ಸೋನಾಲ್ ಅದೃಷ್ಟ ಖುಲಾಯಿಸಿದೆ.