ಕಾಂಗ್ರಾ: ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ರೈತರೊಬ್ಬರು ತಮ್ಮ ಮಗಳ ಆನ್ಲೈನ್ ಶಿಕ್ಷಣಕ್ಕಾಗಿ ಹಸು ಮಾರಾಟ ಮಾಡಿರುವುದಾಗಿ ದೇಶಾದ್ಯಂತ ಭಾರೀ ಸುದ್ದಿಯಾಗಿತ್ತು.
ಮಗಳಿಗೆ ಆನ್ಲೈನ್ ಶಿಕ್ಷಣಕ್ಕಾಗಿ ಸ್ಮಾರ್ಟ್ ಫೋನ್ ಕೊಡಿಸಲು ಅವರು ಹಸು ಮಾರಾಟ ಮಾಡಿದ್ದರು ಎಂದು ಹೇಳಲಾಗಿತ್ತು. ಆದರೆ ಇದು ಸುಳ್ಳು ಎನ್ನುವುದು ತಿಳಿದು ಬಂದಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ನಂತರ ಬಾಲಿವುಡ್ ನಟ ಸೊನು ಸೂದ್ ಕೂಡ ರೈತನ ನೆರವಿಗೆ ಮುಂದಾಗಿದ್ದರು.
ಕಾಂಗ್ರಾ ಜಿಲ್ಲಾಧಿಕಾರಿ ಮತ್ತು ಇತರೆ ಅಧಿಕಾರಿಗಳು ಪರಿಶೀಲನೆಗೆ ತೆರಳಿದಾಗ ಹಸುಗಳನ್ನು ಕಟ್ಟಲು ಕೊಟ್ಟಿಗೆಯಲ್ಲಿ ಜಾಗವಿಲ್ಲದೆ 1 ಹಸು ಮಾರಾಟ ಮಾಡಿರುವುದು ಗೊತ್ತಾಗಿದೆ. ರೈತ ಕುಲದೀಪ್ ಅವರ ಕೊಟ್ಟಿಗೆಯಲ್ಲಿ 7 ಹಸುಗಳಿದ್ದು, ಅವುಗಳಿಗೆ ಜಾಗವಿರಲಿಲ್ಲ. ಈ ಕಾರಣದಿಂದ ಹಸು ಮಾರಾಟ ಮಾಡಿದ್ದ. ಬಂದ ಹಣದಲ್ಲಿ ಮಗಳಿಗೆ ಸ್ಮಾರ್ಟ್ ಫೋನ್ ಕೊಡಿಸಿದ್ದ. ಕುಲದೀಪ್ ಮನೆ ಸಮೀಪದಲ್ಲೇ ಸರ್ಕಾರಿ ಶಾಲೆ ಇದ್ದರೂ ಕೂಡ ಮಕ್ಕಳನ್ನು ದುಬಾರಿ ಶುಲ್ಕದ ಖಾಸಗಿ ಶಾಲೆಗೆ ಸೇರಿಸಿದ್ದಾರೆ ಎನ್ನುವುದು ಗೊತ್ತಾಗಿದೆ.