ಕೊರೊನಾ ವಿರುದ್ಧ ದೇಶದಲ್ಲಿ ಲಸಿಕೆಯ ಹೋರಾಟ ಶುರುವಾಗಿ ತಿಂಗಳುಗಳೇ ಕಳೆದಿದೆ. ಏಪ್ರಿಲ್ 1ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ಸಿಗಲಿದೆ. ಕೊರೊನಾ ಲಸಿಕೆಯನ್ನ ಪಡೆಯಲು ಅರ್ಹರಿರುವ ಪ್ರತಿಯೊಬ್ಬರೂ ಕೋವಿನ್ ಪೋರ್ಟಲ್ ಮೂಲಕ ಲಸಿಕೆಗೆ ನೋಂದಣಿ ಮಾಡಿಕೊಳ್ಳಬಹುದು.
ಇಲ್ಲವಾದಲ್ಲಿ 3 ಗಂಟೆಯ ಒಳಗಾಗಿ ನಿಮ್ಮ ಸಮೀಪದ ಲಸಿಕಾ ಕೇಂದ್ರಕ್ಕೆ ಹೋಗಿ ನೇರವಾಗಿ ಕೂಡ ನೋಂದಣಿ ಮಾಡಿ ಲಸಿಕೆ ಪಡೆಯಬಹುದು ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ರು.
ದೇಶದಲ್ಲಿ ಜನವರಿ 16ರಂದು ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವ ಮೂಲಕ ಈ ಅಭಿಯಾನವನ್ನ ಆರಂಭಿಸಲಾಯ್ತು. ಮೊದಲಿಗೆ ಸರ್ಕಾರಿ ಹಾಗೂ ಖಾಸಗಿ ಕಾರ್ಯಕರ್ತರಿಗೆ ಈ ಅಭಿಯಾನ ಶುರುವಾಗಿ ಮುಂಚೂಣಿ ಸಿಬ್ಬಂದಿ, 60 ವರ್ಷ ಮೇಲ್ಪಟ್ಟವರು, 45 ವರ್ಷ ಮೇಲ್ಪಟ್ಟ ಅಸ್ವಸ್ಥರು ಹೀಗೆ ಹಂತ ಹಂತವಾಗಿ ಅಭಿಯಾನಗಳನ್ನ ನಡೆಸುತ್ತಾ ಇದೀಗ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಏಪ್ರಿಲ್ 1ರಿಂದ ಲಸಿಕೆ ನೀಡಲು ನಿರ್ಧರಿಸಲಾಗಿದೆ.
ಭಾರತದಲ್ಲಿ ಸದ್ಯ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ಗಳೆಂಬ ಎರಡು ಲಸಿಕೆಗಳನ್ನ ಬಳಕೆ ಮಾಡಲಾಗ್ತಿದೆ. ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದವರು 28 ದಿನಗಳ ಬಳಿಕ ಎರಡನೇ ಡೋಸ್ ಪಡೆಯುವಂತೆ ಹೇಳಲಾಗಿತ್ತು. ಆದರೆ ಈ ನಿಯಮದಲ್ಲಿ ಬದಲಾವಣೆ ಮಾಡಿರುವ ಕೇಂದ್ರ ಸರ್ಕಾರ ಕೋವಿಶೀಲ್ಡ್ ಲಸಿಕೆ ಪಡೆದವರು 8 ವಾರಗಳ ಬಳಿಕ 2ನೇ ಡೋಸ್ ಪಡೆಯಲು ಹೇಳಿದೆ. ಆದರೆ ಕೋವ್ಯಾಕ್ಸಿನ್ ಲಸಿಕೆ ಪಡೆದವರಿಗೆ ಈ ನಿಯಮ ಅನ್ವಯಿಸೋದಿಲ್ಲ.
ಇನ್ನು ಲಸಿಕೆಗಳ ವಿಚಾರವಾಗಿ ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಸಚಿವ ಹರ್ಷವರ್ದನ್, ಭಾರತದ ಎರಡೂ ಲಸಿಕೆಗಳು ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿದೆ. ಈಗಲೂ ಅನೇಕ ಮಂದಿಗೆ ಲಸಿಕೆ ಕುರಿತಾಗಿ ಗೊಂದಲವಿದೆ. ಆದರೆ ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಹೇಳಿದ್ರು.