ನವದೆಹಲಿ: ಡಿಸೆಂಬರ್ ಅಂತ್ಯದ ವೇಳೆಗೆ ಭಾರತದಲ್ಲಿ 200 ರಿಂದ 300 ಮಿಲಿಯನ್ ಡೋಸ್ ಕೋವಿಡ್ ಲಸಿಕೆ ಸಿದ್ಧವಾಗಲಿದೆ.
ಡಿಸೆಂಬರ್ ಅಂತ್ಯದ ವೇಳೆಗೆ ಸಿದ್ಧವಾಗಿರುವ ಲಸಿಕೆಯ ಕುರಿತಾಗಿ ಸೇರಂ ಇನ್ಸ್ ಟಿಟ್ಯೂಟ್ ಕಾರ್ಯನಿರ್ವಾಹಕ ನಿರ್ದೇಶಕ ಸುರೇಶ್ ಜಾಧವ್ ಮಾಹಿತಿ ನೀಡಿದ್ದಾರೆ. ಅಂತಿಮ ಪರೀಕ್ಷೆ ನಂತರ ಲಸಿಕೆ ಮಾರ್ಚ್ 2021 ರೊಳಗೆ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.
ಹೆಲ್ತ್ ಫೌಂಡೇಷನ್ ಆಯೋಜಿಸಿದ್ದ ಫಾರ್ಮಾ ಎಕ್ಸ್ ಲೆನ್ಸ್ ಶೃಂಗಸಭೆ -2020 ರಲ್ಲಿ ಮಾತನಾಡಿದ ಅವರು, ಡ್ರಗ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾ ಒಪ್ಪಿದ ನಂತರ ಒಂದು ತಿಂಗಳ ಅವಧಿಯಲ್ಲಿ ಲಸಿಕೆಯ ತುರ್ತು ಬಳಕೆಗೆ ಪರವಾನಿಗೆ ಮತ್ತು ಮಾರುಕಟ್ಟೆ ವ್ಯವಸ್ಥೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಸೆರಮ್ ಸಂಸ್ಥೆ ಲಸಿಕೆಯ ಬಿಡುಗಡೆಗೂ ಮೊದಲು ವಿಶ್ವ ಆರೋಗ್ಯ ಸಂಸ್ಥೆಯ ಅನುಮತಿಯನ್ನು ಪಡೆಯಲಿದೆ. ಪುಣೆ ಮೂಲದ ತಯಾರಿಕಾ ಔಷಧ ತಯಾರಿಕಾ ಸಂಸ್ಥೆ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಸಹಯೋಗದಲ್ಲಿ ಅಭಿವೃದ್ಧಿಪಡಿಸಿದ ಕೊರೊನಾ ಲಸಿಕೆಯ ಕ್ಲಿನಿಕಲ್ ಪ್ರಯೋಗ ಅಂತಿಮ ಹಂತದಲ್ಲಿದೆ. ಬ್ರಿಟಿಷ್ -ಸ್ವೀಡಿಷ್ ಕಂಪನಿ ಆಸ್ಟ್ರಾಜೆನಿಕಾದೊಂದಿಗೆ ಲಸಿಕೆ ತಯಾರಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಲಸಿಕೆ ಪ್ರಯೋಗದ ವೇಳೆ ವಿವರಿಸಲಾಗದ ಅನಾರೋಗ್ಯದ ಕಾರಣ ಪ್ರಯೋಗ ನಿಲ್ಲಿಸಲಾಗಿತ್ತು. ನಂತರ ಮಾರ್ಗದರ್ಶಿಯೊಂದಿಗೆ ಪ್ರಯೋಗ ಮುಂದುವರಿಸಿದ್ದು ಯಶಸ್ವಿಯಾಗಿದೆ. ಯಾವುದೇ ಸಮಸ್ಯೆ ಎದುರಾಗಿಲ್ಲ ಎಂದು ಹೇಳಲಾಗಿದೆ.