ದೇಶದಲ್ಲಿ ಕೊರೊನಾ ಎರಡನೇ ಅಲೆ ರುದ್ರತಾಂಡವ ಆರಂಭಿಸಿದೆ. ಮೊದಲನೇ ಅಲೆಗಿಂತ ಇದು ಭೀಕರವಾಗಿದ್ದು, ಸೋಂಕಿತರ ಸಂಖ್ಯೆಯಲ್ಲಿ ಭಾರತ ಈಗ ಅಮೆರಿಕ ನಂತರದ ಸ್ಥಾನದಲ್ಲಿ ಬಂದು ನಿಂತಿದೆ. ಕಳೆದ ಕೆಲವು ದಿನಗಳಿಂದ ಪ್ರತಿನಿತ್ಯ ಎರಡು ಲಕ್ಷಕ್ಕೂ ಅಧಿಕ ಸೋಂಕಿನ ಪ್ರಕರಣಗಳು ವರದಿಯಾಗುತ್ತಿದ್ದು, ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಭಾರತ ಸೋಂಕಿತರ ಸಂಖ್ಯೆಯಲ್ಲಿ ಮೊದಲ ಸ್ಥಾನಕ್ಕೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ.
ಕೊರೊನಾ ಅಬ್ಬರದ ಮಧ್ಯೆಯೂ 5 ರಾಜ್ಯ / ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆ ನಡೆದಿದ್ದು, ರಾಜಕೀಯ ಪಕ್ಷಗಳ ನಾಯಕರು ಅಬ್ಬರದ ಪ್ರಚಾರ ನಡೆಸಿದ್ದರು. ಅದರಲ್ಲೂ ಪಶ್ಚಿಮ ಬಂಗಾಳದಲ್ಲಿ ಗದ್ದುಗೆ ಏರಲೇಬೇಕೆಂಬ ಕಾರಣಕ್ಕೆ ಸ್ವತಃ ಪ್ರಧಾನಿ ಸೇರಿದಂತೆ ಹಲವು ನಾಯಕರು ಲಕ್ಷಾಂತರ ಸಂಖ್ಯೆಯ ಸಾರ್ವಜನಿಕರ ಮಧ್ಯೆ ರ್ಯಾಲಿ ನಡೆಸಿದ್ದು ಟೀಕೆಗೆ ಗುರಿಯಾಗಿತ್ತು. ಇದೀಗ ಎಲ್ಲ ರಾಜಕೀಯ ನಾಯಕರು ಎಚ್ಚೆತ್ತುಕೊಂಡು ತಮ್ಮ ರ್ಯಾಲಿಗಳನ್ನು ರದ್ದುಪಡಿಸಿದ್ದಾರೆ.
‘ಕೊರೊನಾ’ದಿಂದ ಆತಂಕಗೊಂಡಿರುವವರಿಗೆ ಭರವಸೆ ಹುಟ್ಟಿಸುತ್ತೆ ಈ ಸುದ್ದಿ
ಇದರ ಮಧ್ಯೆ ಕೊರೊನಾ ನಿರ್ವಹಣೆ ವಿಚಾರದಲ್ಲಿ ಕೇಂದ್ರ ಸರ್ಕಾರದ ಕಾರ್ಯವೈಖರಿ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ ಪರಕಾಲ ಪ್ರಭಾಕರ ಕಟು ಟೀಕೆ ಮಾಡಿದ್ದಾರೆ. ‘ಮಿಡ್ ವೀಕ್ ಮ್ಯಾಟರ್ಸ್’ ಭಾಷಣದ ಅವರ ವಿಡಿಯೋ ಈಗ ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಲ್ಲಿ ಹರಿದಾಡುತ್ತಿದೆ.
ರಾಜಕೀಯ ನಾಯಕರುಗಳು ತಮ್ಮ ಜವಾಬ್ದಾರಿಯಿಂದ ನುಣಿಚಿಕೊಳ್ಳುವುದನ್ನು ರೂಢಿಸಿಕೊಂಡಿದ್ದಾರೆ ಎಂದಿರುವ ಪರಕಲ ಪ್ರಭಾಕರ, ಕಳೆದ ಒಂದು ವಾರದ ದೇಶದ ಸ್ಥಿತಿಗತಿಗಳನ್ನು ಗಮನಿಸಿದರೆ ಕೊರೊನಾ ವಿಷಯದಲ್ಲಿ ನಾವು ಎಂತಹ ಪರಿಸ್ಥಿತಿಯಲ್ಲಿ ಇದ್ದೇವೆ. ಇದಕ್ಕೆ ಕೇಂದ್ರ ಸರ್ಕಾರದ ಸಿದ್ಧತೆ ಹೇಗಿತ್ತು ಎಂಬುದರ ಚಿತ್ರಣ ಸಿಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.