ಜಮ್ಮು: ಕೋವಿಡ್-19 ರೋಗಿಗಳ ಚಿಕಿತ್ಸೆಗೆ ಬಳಸುವ ಸರ್ಕಾರದ ಲಕ್ಷಾಂತರ ರೂ. ಮೌಲ್ಯದ ಔಷಧಗಳು ನೀರಿನ ಪಾಲಾಗಿವೆ. ಜಮ್ಮು ಕಾಶ್ಮೀರ ರಾಜ್ಯದ ದೋಡಾ ಜಿಲ್ಲೆಯ ಬಾದೇರ್ವಾಹ್ ನದಿಯಲ್ಲಿ ಔಷಧಿಗಳು ಪತ್ತೆಯಾಗಿದ್ದು, ಸಾಕಷ್ಟು ಮೀನುಗಳು ಸಾವನ್ನಪ್ಪಿವೆ.
ಔಷಧಿಗಳು ಅವಧಿ ಮುಗಿದಿದ್ದರೂ ಅದನ್ನು ಎಲ್ಲೆಂದರಲ್ಲಿ ಎಸೆಯುವಂತಿಲ್ಲ. ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕಾಗುತ್ತದೆ. ಆದರೆ, ನದಿಯಲ್ಲಿ ಔಷಧ ಬಿದ್ದಿದೆ. ಇದರಿಂದ ಗಂಗಾ ದೇವಸ್ಥಾನ, ಪರ್ನಾಲಾ ಮತ್ತು ಅಟಲ್ ಘರ್ ಪ್ರದೇಶದಲ್ಲಿ ಸತ್ತ ಮೀನುಗಳು ತೇಲುತ್ತಿರುವುದು ಪತ್ತೆಯಾಗಿದೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗೆ ತಂಡವೊಂದನ್ನು ರಚಿಸಲಾಗಿದೆ ಎಂದು ಬಾದೇರ್ವಾಹ್ ಹೆಚ್ಚುವರಿ ಡಿಸಿ ರಾಕೇಶ ಕುಮಾರ್ ತಿಳಿಸಿದ್ದಾರೆ.
ನದಿಯು ಬಾದೇರ್ವಾಹ್ ಉಪ ಜಿಲ್ಲೆಯ ಜೀವನದಿಯಾಗಿದೆ. ಜನರು ಕುಡಿಯುವ ನೀರಿಗೆ ಇದನ್ನೇ ಬಳಸುತ್ತಾರೆ. ಅಲ್ಲದೆ, ಸಾವಿರಾರು ಮೀನುಗಾರರು ಈ ನದಿಯಲ್ಲಿ ಮೀನು ಹಿಡಿದು ಜೀವನ ನಡೆಸುತ್ತಾರೆ. ‘ನಮ್ಮ ನದಿಯ ವಿವಿಧ ಭಾಗದಲ್ಲಿ ಬೇರೆ ಬೇರೆ ಔಷಧ ಬಿದ್ದಿದ್ದು ಹಾಗೂ ಮೀನುಗಳು ಸತ್ತಿದ್ದು, ನೋಡಿ ನಾವು ತೀರ ಆತಂಕಿತರಾಗಿದ್ದೇವೆ ಎಂದು ಅಟಲ್‌ಘರ್ ನಿವಾಸಿ ನೀರಜ್ ಸಿಂಗ್ ಮನ್‌ಹಾಸ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.