ಕೋವಿಡ್-19 ಸೋಂಕಿತರ ಸಂಖ್ಯೆಯ ಏರಿಕೆಯಲ್ಲಿ ಕಳೆದ ಕೆಲ ದಿನಗಳಿಂದ ನಿಧಾನಗತಿ ಕಂಡು ಬಂದಿರುವ ಹಿನ್ನೆಲೆಯಲ್ಲಿ, ಪ್ರತಿ ದಶಲಕ್ಷ ಮಂದಿಗೆ ಅತ್ಯಂತ ಕಡಿಮೆ ಪ್ರಮಾಣದ ಕೋವಿಡ್-19 ಕೇಸುಗಳು ದಾಖಲಾಗುತ್ತಿರುವ ದೇಶಗಳ ಪಟ್ಟಿಯಲ್ಲಿ ಭಾರತ ಕಂಡು ಬಂದಿದೆ.
ಕಳೆದ ಏಳು ದಿನಗಳ ಅವಧಿಯಲ್ಲಿ 87 ಕೋವಿಡ್-19 ಪ್ರಕರಣಗಳು/ ದಶಲಕ್ಷ ಮಂದಿ ದರದಲ್ಲಿ ಸೋಂಕಿತರ ಸಂಖ್ಯೆ ಕಾಣುತ್ತಿರುವ ಭಾರತವು ಈ ವಿಚಾರದಲ್ಲಿ ಅಮೆರಿಕ, ಬ್ರಿಟನ್, ರಷ್ಯಾ, ಜರ್ಮನಿ, ಬ್ರೆಜಿಲ್, ಫ್ರಾನ್ಸ್ ಹಾಗೂ ಇಟಲಿಗಳಿಗಿಂತ ಸಾಕಷ್ಟು ಉತ್ತಮ ಸಾಧನೆ ಮಾಡುತ್ತಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಇದೇ ಅವಧಿಯಲ್ಲಿ ಪ್ರತಿ ದಶಲಕ್ಷ ಜನಸಂಖ್ಯೆಗೆ ಒಂದೇ ಒಂದು ಸಾವಿನ ನಿದರ್ಶನ ಕಂಡುಬಂದಿರುವುದಾಗಿ ತಿಳಿದುಬಂದಿದೆ. ಕೋವಿಡ್-19 ಸೋಂಕಿತರ ಪೈಕಿ ಮೃತಪಟ್ಟವರ ಸಂಖ್ಯೆ 1.44% ಇದ್ದು, ಜಗತ್ತಿನಲ್ಲೇ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇದೂ ಒಂದಾಗಿದೆ.
ಭಾರತದಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಇಳಿಮುಖ ಕಾಣುತ್ತಿದ್ದು ಸದ್ಯದ ಮಟ್ಟಿಗೆ 2.13 ಲಕ್ಷ ಸೋಂಕಿತರು ಇದ್ದಾರೆ. ಕಳೆದ ಒಂದು ವಾರದಿಂದ ಪ್ರತಿನಿತ್ಯ ಹೊಸ ಸೋಂಕಿತರ ಸಂಖ್ಯೆಯು 20 ಸಾವಿರಕ್ಕಿಂತ ಕಡಿಮೆಯಿದೆ.
ಗುಣಮುಖರಾದವರ ಸಂಖ್ಯೆಯು 1,01,62,738ರಷ್ಟಿದ್ದು, ಮೃತಪಟ್ಟವರ ಸಂಖ್ಯೆಯು 1,51,918 ಇದೆ. ಒಟ್ಟಾರೆ ಸೋಂಕಿತರು ಹಾಗೂ ಸಕ್ರಿಯ ಸೋಂಕಿತರ ನಡುವಿನ ವ್ಯತ್ಯಾಸವು ಸದ್ಯ 99,49,711ರಷ್ಟಿದೆ.