ಸದ್ಯ ದೇಶದಲ್ಲಿ ಕೊರೊನಾ ಲಸಿಕೆಯ ಅಭಾವದ್ದೇ ಚರ್ಚೆಯಾಗಿದೆ. ವಯಸ್ಸಾದವರು ಹಾಗೂ ಯುವಜನತೆ ಕೊರೊನಾ ಲಸಿಕೆಯನ್ನ ಪಡೆಯಲು ಲಸಿಕಾ ಕೇಂದ್ರಗಳಿಗೆ ಓಡಾಡುತ್ತಿದ್ದಾರೆ. ಆದರೆ ಕೊರೊನಾ ಮೂರನೇ ಅಲೆಯ ಸೂಚನೆ ನೀಡಿರುವ ತಜ್ಞರು ಈ ಅಲೆಯಲ್ಲಿ ಮಕ್ಕಳಿಗೆ ಹೆಚ್ಚಿನ ಅಪಾಯವಿದೆ ಎಂದು ಹೇಳಿದ್ದಾರೆ.
ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಮಕ್ಕಳಲ್ಲಿ ಕಂಡು ಬರುವ ಕೊರೊನಾ ಲಕ್ಷಣಗಳ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಅಲ್ಲದೇ ಈ ಸ್ಥಿತಿಯಲ್ಲಿ ಮಕ್ಕಳನ್ನ ಹೇಗೆ ಅಪಾಯದಿಂದ ಪಾರು ಮಾಡಬೇಕು ಅನ್ನೋದಕ್ಕೂ ಸೂಚನೆ ನೀಡಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕೇಂದ್ರ ಆರೋಗ್ಯ ಸಚಿವಾಲಯ ಕೊರೊನಾ ಸೋಂಕಿಗೆ ಒಳಗಾದ ಹೆಚ್ಚಿನ ಮಕ್ಕಳು ಲಕ್ಷಣ ರಹಿತ ಇಲ್ಲವೇ ಸೌಮ್ಯ ಲಕ್ಷಣಗಳನ್ನ ಹೊಂದಿರುತ್ತಾರೆ ಎಂದು ಹೇಳಿದೆ.
ಲಕ್ಷಣ ರಹಿತ ಸೋಂಕು ಅಂದರೆ ಕೊರೊನಾ ಸೋಂಕಿಗೆ ಒಳಗಾದ ಬಳಿಕವೂ ಯಾವುದೇ ಲಕ್ಷಣಗಳನ್ನ ಹೊಂದಿರದೇ ಇರೋದಾಗಿದೆ. ಲಕ್ಷಣವನ್ನೇ ಹೊಂದಿಲ್ಲದ ರೋಗಿ 14 ದಿನಗಳ ಬಳಿಕ ಗಂಭೀರ ಲಕ್ಷಣವನ್ನ ತೋರಿಸಬಹುದು ಹಾಗೂ ಸೋಂಕಿನ ಅರಿವೇ ಇಲ್ಲದೆ ಹೆಚ್ಚಿನ ಜನರಿಗೆ ವೈರಾಣುವನ್ನ ಹರಡಬಹುದಾಗಿದೆ.
ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ ಕೊರೊನಾ ಸೋಂಕಿಗೆ ಒಳಗಾದ ಮಕ್ಕಳು ಜ್ವರ, ಕೆಮ್ಮು, ಉಸಿರಾಟದ ತೊಂದರೆ, ಬಳಲಿಕೆ, ಗಂಟಲು ಕೆರೆತ, ಮಾಂಸಖಂಡಗಳಲ್ಲಿ ನೋವು, ಶೀತ, ಅತಿಸಾರ, ವಾಸನೆ ಹಾಗೂ ರುಚಿ ಕಳೆದುಕೊಳ್ಳುವಂತಹ ಕೊರೊನಾದ ಸಾಮಾನ್ಯ ಲಕ್ಷಣಗಳನ್ನೇ ಹೊಂದಿರುತ್ತಾರೆ. ಕೆಲವು ಮಕ್ಕಳಲ್ಲಿ ಜಠರಗರುಳಿನ ಸಮಸ್ಯೆಯೂ ಕಾಣಿಸಿಕೊಳ್ಳಬಹುದು ಎಂದು ಹೇಳಿದೆ.
ಅಲ್ಲದೇ ಸಿಸ್ಟಮ್ ಇನ್ಫ್ಲಮೇಟರಿ ಸಿಂಡ್ರೋಮ್ ಕೂಡ ಈ ಸೋಂಕಿನ ಹೊಸ ಲಕ್ಷಣವಾಗಿರಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಈ ಲಕ್ಷಣವನ್ನ ಹೊಂದಿರುವ ಮಕ್ಕಳಲ್ಲಿ ಜ್ವರ ಬಿಟ್ಟುಬಿಡದೇ ಕಾಡಲಿದೆ.
ಲಕ್ಷಣರಹಿತ ಸೋಂಕನ್ನ ಹೊಂದಿರುವ ಮಕ್ಕಳನ್ನ ಮನೆಯಲ್ಲಿಯೇ ನೋಡಿಕೊಳ್ಳಬಹುದಾಗಿದೆ. ಅಲ್ಲದೇ ಸೌಮ್ಯ ಲಕ್ಷಣವನ್ನ ಹೊಂದಿರುವ ಮಕ್ಕಳು ಸಹ ಸೂಕ್ತ ವೈದ್ಯಕೀಯ ಸಲಹೆಯ ಜೊತೆಯಲ್ಲಿ ಮನೆಯಲ್ಲಿಯೇ ಐಸೋಲೇಟ್ ಆಗಬಹುದು ಎಂದು ಕೇಂದ್ರ ಸಚಿವಾಲಯ ಮಾಹಿತಿ ನೀಡಿದೆ.
ಸದ್ಯ ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಲಸಿಕೆಯನ್ನ 2 ರಿಂದ 12 ವರ್ಷದ ಮಕ್ಕಳ ಮೇಲೆ ಪ್ರಾಯೋಗಿಕ ಪರೀಕ್ಷೆಗೆ ಬಳಕೆ ಮಾಡಲಾಗ್ತಿದೆ. ಶೀಘ್ರದಲ್ಲೇ ಮಕ್ಕಳಿಗೆ ಕೊರೊನಾ ಲಸಿಕೆ ಲಭ್ಯವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭಾರತ್ ಬಯೋಟೆಕ್ನ ಪ್ರಾಯೋಗಿಕ ಪರೀಕ್ಷೆಯಲ್ಲಿ 18 ವರ್ಷದ ಒಳಗಿನ 525 ಮಂದಿ ಆರೋಗ್ಯವಂತರನ್ನ ಬಳಕೆ ಮಾಡಲಾಗಿದೆ.