ದೇಶದಲ್ಲಿ ಕೊರೊನಾ ಎರಡನೇ ಅಲೆ ಆರ್ಭಟಿಸುತ್ತಿದೆ. ಕಳೆದ 24 ಗಂಟೆಯಲ್ಲಿ ಬರೋಬ್ಬರಿ 2.94 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ದೇಶವಾಸಿಗಳನ್ನು ಬೆಚ್ಚಿಬೀಳಿಸಿದೆ.
ಮೊದಲನೇ ಅಲೆ ಕಾಣಿಸಿಕೊಂಡ ಸಂದರ್ಭದಲ್ಲಿ ಸೆಪ್ಟೆಂಬರ್ 17 ರಂದು 98,795 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಇದುವರೆಗಿನ ಅತ್ಯಧಿಕ ದಾಖಲೆಯಾಗಿತ್ತು. ಈಗ ಅದೆಲ್ಲವನ್ನೂ ಮೀರಿಸುವಂತೆ ಭಾರೀ ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ.
ಅಲ್ಲದೇ ವಿಶ್ವದ ರಾಷ್ಟ್ರಗಳ ಪೈಕಿ ಒಂದೇ ದಿನ ಇಷ್ಟು ಮಂದಿ ಸೋಂಕಿತರು ಭಾರತದಲ್ಲಿ ಇದೇ ಮೊದಲ ಬಾರಿಗೆ ಪತ್ತೆಯಾಗಿರುವುದು ಹೊಸ ದಾಖಲೆಯಾಗಿದೆ. ಈ ಹಿಂದೆ ಅಮೆರಿಕಾದಲ್ಲಿ ಒಂದೇ ದಿನ 3,07,570 ಸೋಂಕಿತರು ಪತ್ತೆಯಾಗಿರುವುದು ಅತ್ಯಧಿಕ ಎಂದು ಪರಿಗಣಿಸಲ್ಪಟ್ಟಿದೆ.
ಮಂಗಳವಾರದಂದು ದೇಶದಲ್ಲಿ ಒಟ್ಟು 2,021 ಮಂದಿ ಸಾವನ್ನಪ್ಪಿದ್ದು, ಮಹಾರಾಷ್ಟ್ರ ಒಂದರಲ್ಲೇ 519 ಮಂದಿ ಕೋವಿಡ್ ಗೆ ಬಲಿಯಾಗಿದ್ದಾರೆ. ದೆಹಲಿಯಲ್ಲಿ 277, ಛತ್ತೀಸ್ಘಡ 191, ಉತ್ತರ ಪ್ರದೇಶ 162, ಕರ್ನಾಟಕ 149 ಹಾಗೂ ಗುಜರಾತಿನಲ್ಲಿ 121 ಮಂದಿ ಸಾವಿಗೀಡಾಗಿದ್ದಾರೆ.
ಕೊರೊನಾ ಎರಡನೇ ಅಲೆ ಆರಂಭವಾದಾಗ ಏಪ್ರಿಲ್ ತಿಂಗಳೊಂದರಲ್ಲೇ 34 ಲಕ್ಷ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಆಘಾತಕಾರಿ ಅಂಶವೆಂದರೆ ಕಳೆದ ಏಳು ದಿನಗಳ ಅವಧಿಯಲ್ಲೇ 17.40 ಲಕ್ಷ ಪ್ರಕರಣಗಳು ಪತ್ತೆಯಾಗಿವೆ.
ಮಂಗಳವಾರದಂದು ಮಹಾರಾಷ್ಟ್ರದಲ್ಲಿ 62097 ಮತ್ತು ದೆಹಲಿಯಲ್ಲಿ 28395 ಪ್ರಕರಣಗಳು ಪತ್ತೆಯಾಗಿದ್ದರೆ, ಇನ್ನುಳಿದಂತೆ ಕರ್ನಾಟಕ 21794, ಕೇರಳ 19577, ಗುಜರಾತ್ 12206, ರಾಜಸ್ಥಾನ್ 12201, ತಮಿಳುನಾಡು 10986, ಬಿಹಾರ 10455, ಪಶ್ಚಿಮ ಬಂಗಾಳ 9819, ಹರಿಯಾಣ 7811, ತೆಲಂಗಾಣ 5926, ಜಾರ್ಖಂಡ್ 4969, ಒಡಿಶಾ 4761, ಉತ್ತರಾಖಾಂಡ 3012, ಜಮ್ಮು ಮತ್ತು ಕಾಶ್ಮೀರ 2030 ಮತ್ತು ಗೋವಾದಲ್ಲಿ 1160 ಪ್ರಕರಣಗಳು ಪತ್ತೆಯಾಗಿವೆ.