ಮಹಾಮಾರಿ ಕೊರೊನಾ ಬೆಂಬಿಡದೆ ಕಾಡುತ್ತಿದೆ. ಈಗಾಗಲೇ ದೇಶದಲ್ಲಿ ಆರು ಲಕ್ಷಕ್ಕೂ ಅಧಿಕ ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಸಾವಿರಾರು ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ನಮ್ಮ ರಾಜ್ಯ ಒಂದರಲ್ಲೇ 20 ಸಾವಿರ ಸನಿಹದಲ್ಲಿದೆ ಕೊರೊನಾ ಸೋಂಕಿತರ ಸಂಖ್ಯೆ. ಪ್ರತಿ ದಿನ ಸಾವಿರಾರು ಪಾಸಿಟಿವ್ ಕೇಸ್ ಗಳು ಪತ್ತೆಯಾಗುತ್ತಿವೆ. ಇನ್ನು ಕೊರೊನಾಗೆ ಔಷಧ ಕಂಡು ಹಿಡಿಯುವುದರಲ್ಲಿ ವೈದ್ಯ ತಂಡ ನಿರತವಾಗಿದೆ.
ಇದರ ಬೆನ್ನಲ್ಲೇ ಇದೀಗ ಮಹಾಮಾರಿಗೆ ಲಸಿಕೆಯೊಂದನ್ನು ಕಂಡು ಹಿಡಿಯಲಾಗಿದ್ದು, ಈ ಔಷಧವನ್ನು ಆಗಸ್ಟ್ 15 ರಂದು ಬಿಡುಗಡೆ ಮಾಡಲಾಗುತ್ತಿದೆ. ಕೋವಿಡ್-19 ರೋಗ ನಿರೋಧಕ ಚುಚ್ಚುಮದ್ದು ಕೊವ್ಯಾಕ್ಸಿನ್ ಎಂಬ ಔಷಧ ಇದೀಗ ಯಶಸ್ವಿಯಾಗುವುದು ನಿಶ್ಚಿತವಾಗಿದೆ. ಈ ವಿಚಾರವನ್ನು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ನ ಚೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಕೃಷ್ಣ ಎಲಾ ಸ್ಪಷ್ಟಪಡಿಸಿದ್ದಾರೆ.
ಕೊವ್ಯಾಕ್ಸಿನ್ ಚುಚ್ಚುಮದ್ದನ್ನು ವೆರೋ ಸೆಲ್ ಪ್ಲಾಟ್ಫಾರಂ ಮೇಲೆ ಅಭಿವೃದ್ಧಿಪಡಿಸಲಾಗಿದೆಯಂತೆ. ಇನ್ನು ಈ ಚುಚ್ಚುಮದ್ದನ್ನು ನೀಡಿದಾಗ ವೈರಾಣುವಿನ ಸ್ಟ್ರೈನ್ಗೆ ಸೋಂಕು ಉಂಟು ಮಾಡುವುದಾಗಲಿ ಅಥವಾ ಈ ವೈರಸ್ ವಂಶಾಭಿವೃದ್ಧಿ ಮಾಡುವುದಕ್ಕೆ ಅವಕಾಶ ಇರುವುದಿಲ್ಲ ಎಂದು ಹೇಳಿದ್ದಾರೆ. ಈ ವೈರಸ್ ರೋಗನಿರೋಧಕ ವ್ಯವಸ್ಥೆಯನ್ನು ಜಾಗೃತಗೊಳಿಸುತ್ತದೆಯಂತೆ.