ನವದೆಹಲಿ: ಕೊರೊನಾ ಸೋಂಕು ತಡೆಯುವ ಲಸಿಕೆಯ ಮೊದಲ ಹಂತದ ಕ್ಲಿನಿಕಲ್ ಟ್ರಯಲ್ ಇಂದು ಆರಂಭವಾಗಲಿದೆ. ಬೆಳಗಾವಿಯಲ್ಲಿ ಮುಂದಿನ ವಾರ ಪರೀಕ್ಷೆ ನಡೆಯಲಿದ್ದು ಪ್ರಯೋಗ ಯಶಸ್ವಿಯಾಗುವ ಭರವಸೆ ಮೂಡಿಸಿದೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ನೇತೃತ್ವದ ಕೊವ್ಯಾಕ್ಸಿನ್ ಕ್ಲಿನಿಕಲ್ ಟ್ರಯಲ್ ಗೆ ಚಾಲನೆ ನೀಡಲಾಗುವುದು. ಸ್ವದೇಶಿ ನಿರ್ಮಿತ ಕೊರೊನಾ ಲಸಿಕೆ ಇದಾಗಿದ್ದು ಭಾರತ್ ಬಯೋಟೆಕ್, ಐಸಿಎಂಆರ್, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ.
ದೆಹಲಿಯ ಏಮ್ಸ್ ಸಮಿತಿ ಮಾನವರ ಮೇಲೆ ಪ್ರಯೋಗಕ್ಕೆ ಅನುಮೋದನೆ ನೀಡಿದೆ. ಪ್ರಯೋಗಕ್ಕೆ ಒಳಪಡಲು ಸ್ವಯಂಸೇವಕರನ್ನು ಆಹ್ವಾನಿಸಲಾಗಿದ್ದು ಇಂದಿನಿಂದ ನೋಂದಣಿ ಆರಂಭವಾಗಲಿದೆ. ಮೊದಲ ಹಂತದಲ್ಲಿ 375 ಸ್ವಯಂಸೇವಕರ ಮೇಲೆ ಔಷಧ ಪ್ರಯೋಗ ನಡೆಸಲಾಗುವುದು. ಆಗಸ್ಟ್ 15ರ ವೇಳೆಗೆ ಲಸಿಕೆ ಲಭ್ಯವಾಗಲಿದೆ ಎಂದು ಹೇಳಲಾಗಿದ್ದರೂ ವಿವಿಧ ಹಂತಗಳ ಪ್ರಯೋಗದ ನಂತರ ಲಸಿಕೆ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.