
ಕೇಂದ್ರ ಗೃಹ ಸಚಿವ ಅಮಿತ್ ಶಾ ಪಶ್ಚಿಮ ಬಂಗಾಳಕ್ಕೆ ಭೇಟಿ ಕೊಟ್ಟ ವೇಳೆ ತಮ್ಮ ಮನೆಗೆ ಆಗಮಿಸಿ ಭೋಜನ ಸವಿದರಾದರೂ ತಮ್ಮೊಂದಿಗೆ ಒಂದೇ ಒಂದು ಮಾತನ್ನೂ ಆಡದೇ ಅಲ್ಲಿಂದ ಹೊರಟಿದ್ದಾರೆ ಎಂದು ಜಾನಪದ ಗಾಯಕ ಬಸುದೇಬ್ ದಾಸ್ ತಿಳಿಸಿದ್ದಾರೆ.
ಜಾನಪದ ಗಾಯಕನ ವಿಚಾರದಲ್ಲಿ ರಾಜಕೀಯ ಕೆಸರೆರಚಾಟವೂ ಸಖತ್ತಾಗಿಯೇ ನಡೆಯುತ್ತಿದೆ. ಅಮಿತ್ ಶಾ ಅವರ ಮನೆಗೆ ಭೇಟಿ ಕೊಟ್ಟ ಬಳಿಕವಷ್ಟೇ ತೃಣಮೂಲ ಕಾಂಗ್ರೆಸ್ಗೆ ಅವರ ಮೇಲೆ ನಿಗಾ ಬಂದಿದೆ ಎಂದು ಬಿಜೆಪಿ ಆಪಾದನೆ ಮಾಡಿದೆ.
ಬಿರ್ಭುಮ್ ಜಿಲ್ಲೆಯ ಟಿಎಂಸಿ ಮುಖ್ಯಸ್ಥ ಅನುಬ್ರತಾ ಮೊಂಡಲ್ ಈ ಹಿಂದೆ ದಾಸ್ ಅವರಿಗೆ ಸರ್ಕಾರದಿಂದ ಆರ್ಥಿಕ ನೆರವು ಕೊಡಿಸುವ ಭರವಸೆ ಕೊಟ್ಟಿದ್ದರೂ ಸಹ ಅದು ಇದುವರೆಗೂ ಈಡೇರಿಲ್ಲ ಎಂದು ದಾಸ್ ಬೇಸರ ವ್ಯಕ್ತಪಡಿಸಿದ್ದಾರೆ.
“ಅಷ್ಟು ದೊಡ್ಡ ಮನುಷ್ಯರಾದ ಅಮಿತ್ ಶಾ ಅವರಿಗೆ ನಮ್ಮ ರಾಜ್ಯದಲ್ಲಿ ಕಲಾವಿದರು ಎದುರಿಸುತ್ತಿರುವ ಪರಿಸ್ಥಿತಿಯ ಬಗ್ಗೆ ತಿಳಿಸಿ ಹೇಳಬೇಕು ಎಂದುಕೊಂಡಿದ್ದೆ. ನಮಗೆ ರಾಜ್ಯ ಸರ್ಕಾರ ಅದಾಗಲೇ ಸಹಾಯ ಮಾಡುತ್ತಿದೆ. ಆದರೆ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಏನಾದರೂ ಮಾಡಬಹುದೇ ಎಂದು ತಿಳಿಯಬೇಕು. ನನ್ನ ಮಗಳ ಉನ್ನತ ಶಿಕ್ಷಣದ ವೆಚ್ಚಕ್ಕೆ ಹಣ ಹೊಂದಿಸಲು ನಾನು ಪರದಾಡುತ್ತಿದ್ದೇನೆ” ಎಂದು ದಾಸ್ ಅವರು ಟಿಎಂಸಿ ಕಾರ್ಯಾಲಯದಲ್ಲಿ ಮೊಂಡಲ್ ಜೊತೆಯಲ್ಲಿ ಕುಳಿತಿದ್ದ ವೇಳೆ ತಿಳಿಸಿದ್ದಾರೆ.