ನವದೆಹಲಿ: ಮಾಹಿತಿ ಹಕ್ಕು ಕಾಯ್ದೆ(RTI) ಅರ್ಜಿಗೆ ನೀಡಲಾದ ಪ್ರತಿಕ್ರಿಯೆಯಲ್ಲಿ ಕೊರೋನಾ ಸೋಂಕಿನ ಕುರಿತು ವಿಶ್ವ ಆರೋಗ್ಯ ಸಂಸ್ಥೆಯಿಂದ ಭಾರತಕ್ಕೆ ಮೊದಲೇ ಎಚ್ಚರಿಕೆ ಸಂದೇಶ ರವಾನಿಸಿದ್ದ ಸಂಗತಿ ಗೊತ್ತಾಗಿದೆ.
2019 ರ ಡಿಸೆಂಬರ್ 12 ರಿಂದ 29 ರ ನಡುವೆ ಚೀನಾದ ಹುನಾನ್ ಪ್ರಾಂತ್ಯದಲ್ಲಿ ಕೊರೋನಾ ವೈರಸ್ ಆರಂಭವಾದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಜನವರಿ 11ಕ್ಕೂ ಮೊದಲೇ ಭಾರತಕ್ಕೆ ಸಂದೇಶ ರವಾನಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ವತಿಯಿಂದ ಎಚ್ಚರಿಕೆ ಸಂದೇಶ ನೀಡಿದರೂ ಚೀನಾದ ಯಾವುದೇ ಪ್ರಯಾಣ ಮತ್ತು ವ್ಯಾಪಾರ ನಿರ್ಬಂಧಗಳಿಗೆ ಭಾರತ ಕ್ರಮ ಕೈಗೊಂಡಿರಲಿಲ್ಲ ಎಂದು ಹೇಳಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ ಆಗ್ನೇಯ ಏಷ್ಯಾ ಪ್ರಾದೇಶಿಕ ನಿರ್ದೇಶಕ ಡಾ. ಪೂನಮ್ ಖೇತ್ರಪಾಲ್ ಸಿಂಗ್ ಅವರು, ಆರೋಗ್ಯ ಸಚಿವರಿಗೆ ಜನವರಿ 11ರಂದು ಎಚ್ಚರಿಕೆ ಸಂದೇಶದ ಇ -ಮೇಲ್ ಕಳುಹಿಸಿದ್ದಾರೆ. ಚೀನಾದ ಹುವಾನ್ ಪ್ರಾಂತದಲ್ಲಿ ಮಾರಕ ಕೊರೋನ ವೈರಸ್ ಕಾಣಿಸಿಕೊಂಡಿರುವ ಬಗ್ಗೆ ಅವರು ಮಾಹಿತಿ ನೀಡಿದ್ದು ಸುರಕ್ಷತೆ ಕ್ರಮ ಕೈಗೊಳ್ಳಲು ಸಲಹೆ ನೀಡಿದ್ದಾರೆ ಎನ್ನುವುದು ಆರ್.ಟಿ.ಐ. ಅರ್ಜಿಯ ಮಾಹಿತಿಯಲ್ಲಿ ಗೊತ್ತಾಗಿದೆ.
ಜನವರಿ 11ರಂದು ಎಚ್ಚರಿಕೆ ಸಂದೇಶ ಬಂದಿದ್ದು ಜನವರಿ 30ರಂದು ಭಾರತದಲ್ಲಿ ಮೊದಲ ಬಾರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಇದುವರೆಗೂ 77 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿ ಸುಮಾರು 1.17 ಲಕ್ಷ ಸಾವು ವರದಿಯಾಗಿವೆ. ಭಾರತದಲ್ಲಿ ಮೊದಲಿಗೆ ಜನತಾ ಕರ್ಫ್ಯೂ ಜಾರಿ ಮಾಡಿ ಕೊರೋನಾ ನಿಯಂತ್ರಣದ ಕಾರಣದಿಂದ ಮಾರ್ಚ್ 21 ರಂದು 21 ದಿನಗಳ ಕಾಲ ಲಾಕ್ಡೌನ್ ಜಾರಿಗೊಳಿಸಲಾಗಿತ್ತು. ಮಾರ್ಚ್ 22ರಂದು ಎಲ್ಲಾ ಅಂತರಾಷ್ಟ್ರೀಯ ಪ್ರಯಾಣವನ್ನು ಸ್ಥಗಿತಗೊಳಿಸಲಾಗಿತ್ತು.
ಚೀನಾ ಕೊರೋನ ವೈರಸ್ ಬಗ್ಗೆ ಜನವರಿ 7 ರಂದು ಘೋಷಿಸಿದ ನಂತರ ಆರೋಗ್ಯ ಸೇವೆಗಳ ಮಹಾನಿರ್ದೇಶಕರ ಜಂಟಿ ಮೇಲ್ವಿಚಾರಣಾ ಸಮಿತಿ ಜನವರಿ 8ರಂದು ಸಭೆ ನಡೆಸಿ ಆರೋಗ್ಯ ಪರಿಸ್ಥಿತಿಯ ಪರಾಮರ್ಶೆ ನಡೆಸಿದೆ ಎಂದು ಸುಪ್ರೀಂಕೋರ್ಟ್ ಗೆ ಮಾಹಿತಿ ನೀಡಲಾಗಿದೆ. ಜನವರಿ ತಿಂಗಳಲ್ಲಿ ಸರಣಿ ಸಭೆಗಳನ್ನು ನಡೆಸಿ ಪರಿಸ್ಥಿತಿ ಬಗ್ಗೆ ನಿಗಾ ವಹಿಸಲಾಗಿದೆ. ಆದರೆ ಪ್ರಯಾಣಿಕರಿಗೆ ಯಾವುದೇ ನಿರ್ದಿಷ್ಟ ಆರೋಗ್ಯ ಕ್ರಮಗಳ ಬಗ್ಗೆ ಶಿಫಾರಸು ಮಾಡಿರಲಿಲ್ಲ ಎಂದು ಹೇಳಲಾಗಿದೆ.