ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಕೊರೊನಾ ಲಸಿಕೆ ಕುರಿತು ಪ್ರಸ್ತಾಪಿಸಿ ಶೀಘ್ರವೇ ಲಸಿಕೆ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದ್ದರು. ಅಂತೆಯೇ ಕೇಂದ್ರ ಸರ್ಕಾರ ಅನುಮತಿ ನೀಡಿದಲ್ಲಿ ಕೊರೊನಾ ಚಿಕಿತ್ಸೆಗೆ ದೇಶೀಯವಾಗಿಯೇ ಅಭಿವೃದ್ಧಿಪಡಿಸಲಾಗಿರುವ ಎರಡು ಲಸಿಕೆಗಳನ್ನು ತುರ್ತಾಗಿ ಬಳಸಲು ಅನುಮತಿ ನೀಡಬಹುದಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.
ದೇಶದಲ್ಲಿ ದಿನವು 50 ಸಾವಿರಕ್ಕೂ ಹೆಚ್ಚಿನ ಹೊಸ ಪ್ರಕರಣ ದಾಖಲಾಗುತ್ತಿದ್ದು, ಸೋಂಕಿತರ ಸಂಖ್ಯೆ 28 ಲಕ್ಷಕ್ಕೇರಿದೆ. ಕೇಂದ್ರ ಗೃಹ ವ್ಯವಹಾರಗಳ ಕುರಿತಾದ ಸಂಸದೀಯ ಸ್ಥಾಯಿ ಸಮಿತಿ ಮುಂದೆ ಹಾಜರಾಗಿದ್ದ ಐಸಿಎಂಆರ್ ಪ್ರಧಾನ ನಿರ್ದೇಶಕ ಬಲರಾಮ್ ಭಾರ್ಗವ್, ಭಾರತದಲ್ಲಿ ಮೂರು ಕಂಪನಿಗಳು ಅಭಿವೃದ್ಧಿಪಡಿಸಿರುವ ಕೊರೊನಾ ಲಸಿಕೆಯ ಪ್ರಯೋಗಗಳು ವಿವಿಧ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ಭಾರತ್ ಮತ್ತು ಕ್ಯಾಡಿಲಾ ಲಸಿಕೆಗಳು ಎರಡನೇ ಹಂತದ ಪ್ರಯೋಗ ಮುಕ್ತಾಯ ಹಂತದಲ್ಲಿವೆ. ಇವು ಪೂರ್ಣಗೊಳ್ಳಲು ಸಾಮಾನ್ಯವಾಗಿ ಆರರಿಂದ ಒಂಬತ್ತು ತಿಂಗಳು ಬೇಕಾಗಬಹುದು. ಕೇಂದ್ರ ಸರ್ಕಾರ ಅನುಮತಿ ನೀಡಿದರೆ ಲಸಿಕೆಗಳನ್ನು ತುರ್ತು ಬಳಕೆಗೆ ಅನುಮತಿ ನೀಡಬಹುದಾಗಿದೆ ಎಂದು ಹೇಳಿದ್ದಾರೆನ್ನಲಾಗಿದೆ.
ಸಂಸದೀಯ ಸಮಿತಿ ಸಭೆಯಲ್ಲಿ ಭಾಗಿಯಾಗಿದ್ದ ಸಂಸದರೊಬ್ಬರು ಈ ಕುರಿತಾಗಿ ಮಾಹಿತಿ ನೀಡಿದ್ದು, ಕೇಂದ್ರ ಅನುಮತಿ ನೀಡಿದಲ್ಲಿ ಲಸಿಕೆ ಬಳಕೆ ಮಾಡಲಾಗುವುದು ಎಂದು ಹೇಳಲಾಗಿದೆ.