ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಕಳೆದ 24 ಗಂಟೆಗಳಲ್ಲಿ ಎರಡು ಲಕ್ಷ 80 ಸಾವಿರಕ್ಕೂ ಹೆಚ್ಚು ಜನರು ಸೋಂಕಿಗೊಳಗಾಗಿದ್ದಾರೆ. ಆರೋಗ್ಯ ಸಚಿವಾಲಯವು ಕೊರೊನಾ ವೈರಸ್ ಹರಡುವಿಕೆ ಮತ್ತು ಅದರ ಚಿಕಿತ್ಸೆಯಲ್ಲಿ ಬಳಸುವ ಔಷಧಿಗಳಿಗೆ ಸಂಬಂಧಿಸಿದ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಕೊರೊನಾ ಸೋಂಕು ಮುಖ್ಯವಾಗಿ ಗಾಳಿಯ ಮೂಲಕ ಹರಡುತ್ತದೆ. ಸೋಂಕಿತ ವ್ಯಕ್ತಿಯು ಕೆಮ್ಮಿದಾಗ, ಸೀನುವಾಗ ಅಥವಾ ಮಾತುಕತೆ ನಡೆಸಿದಾಗ ಬಿಡುಗಡೆಯಾಗುವ ಸಣ್ಣ ಹನಿಗಳು ಮೂಲಕ ಕೊರೊನಾ ಹರಡುತ್ತದೆ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
ಹಿಂದಿನ ವರ್ಷ ಕೊರೊನಾ ಸೋಂಕಿತನ ಸಂಪರ್ಕಕ್ಕೆ ಬಂದಲ್ಲಿ ಮಾತ್ರ ಸೋಂಕು ಹರಡುತ್ತದೆ ಎನ್ನಲಾಗಿತ್ತು. ಆರೋಗ್ಯ ಸಚಿವಾಲಯದ ಹೊಸ ಮಾರ್ಗಸೂಚಿಯಲ್ಲಿ ಔಷಧಿಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಐವರ್ಮೆಕ್ಟಿನ್ ಮತ್ತು ಸ್ಟೀರಾಯ್ಡ್ ಮತ್ತು ಪ್ಲಾಸ್ಮಾ ಚಿಕಿತ್ಸೆ ಬಗ್ಗೆ ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಮಾರ್ಗಸೂಚಿ ಪ್ರಕಾರ, ಕೊರೊನಾ ಸೌಮ್ಯ ರೋಗಲಕ್ಷಣಗಳ ಸಂದರ್ಭದಲ್ಲಿ ಐವರ್ಮೆಕ್ಟಿನ್ ಔಷಧಿಗಳನ್ನು ಖಾಲಿ ಹೊಟ್ಟೆಯಲ್ಲಿ ದಿನಕ್ಕೆ ಮೂರರಿಂದ ಐದು ಬಾರಿ ನೀಡಬಹುದು. ಆದರೆ ಗರ್ಭಿಣಿ ಅಥವಾ ಹಾಲುಣಿಸುವ ಮಹಿಳೆಯರಿಗೆ ಈ ಔಷಧಿಯನ್ನು ನೀಡಬಾರದು.
ಹೊಸ ಮಾರ್ಗಸೂಚಿ ಪ್ರಕಾರ, ಕೊರೊನಾ ಸೌಮ್ಯ ಲಕ್ಷಣವಿರುವ ವ್ಯಕ್ತಿಗೆ ಸ್ಟಿರಾಯ್ಡ್ ನೀಡುವ ಅಗತ್ಯವಿಲ್ಲ. ಜ್ವರ, ಕೆಮ್ಮು ಹೆಚ್ಚಿದ್ದಲ್ಲಿ ಮೌಖಿಕ ಸ್ಟಿರಾಯ್ಡ್ ನೀಡಬಹುದು ಎಂದು ಹೇಳಲಾಗಿದೆ. ಆರೋಗ್ಯ ಸಚಿವಾಲಯದ ಕಳೆದ ವರ್ಷದ ಮಾರ್ಗಸೂಚಿಗಳಲ್ಲಿ, ಪ್ಲಾಸ್ಮಾ ಚಿಕಿತ್ಸೆಯನ್ನು ಕೊರೊನಾ ಚಿಕಿತ್ಸೆಯ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಆದರೆ ಈ ಬಾರಿ ಅದನ್ನು ತೆಗೆದು ಹಾಕಲಾಗಿದೆ.