ದೇಶದಾದ್ಯಂತ ಕೊರೊನಾ 2ನೇ ಅಲೆಯ ಭೀತಿ ಶುರುವಾಗಿದೆ. ಕಳೆದ ಒಂದು ವಾರದಲ್ಲಿ ಕೊರೊನಾ ಸೋಂಕಿನ ಪ್ರಮಾಣ 67 ಪ್ರತಿಶತ ಏರಿಕೆ ಕಂಡಿದೆ. ಈ ಏಳು ದಿನಗಳ ಅವಧಿಯಲ್ಲಿ ಕೊರೊನಾದಿಂದ ಸಾವಿಗೀಡಾಗುತ್ತಿರುವ ಸಂಖ್ಯೆಯಲ್ಲಿ ಕೂಡ 41 ಪ್ರತಿಶತ ಏರಿಕೆ ಕಂಡಿದೆ. 9 ತಿಂಗಳುಗಳ ಬಳಿಕ ಕೊರೊನಾದಿಂದ ಅತಿ ಹೆಚ್ಚು ಅಂದರೆ 1239 ಮಂದಿ ಜೀವ ತೆತ್ತಿದ್ದಾರೆ. ಆದರೆ ಒಂದು ಸಮಾಧಾನಕಾರ ವಿಚಾರ ಅಂದರೆ ಕೊರೊನಾ ಮೊದಲ ಅಲೆಗೆ ಹೋಲಿಸಿದ್ರೆ ಎರಡನೇ ಅಲೆಯಲ್ಲಿ ಸಾವಿನ ಪ್ರಮಾಣ ಕೊಂಚ ಕಡಿಮೆ ಇದೆ.
ಕಳೆದ ಒಂದು ವಾರಗದಲ್ಲಿ ದೇಶದಲ್ಲಿ ಒಟ್ಟು 2.6 ಲಕ್ಷ ಹೊಸ ಕೇಸ್ಗಳು ಬೆಳಕಿಗೆ ಬಂದಿವೆ. ಇದಕ್ಕೂ ಹಿಂದಿನ ವಾರ ದೇಶದಲ್ಲಿ 1.55 ಲಕ್ಷ ಹೊಸ ಕೇಸ್ಗಳು ದಾಖಲಾಗಿದ್ದವು. ಒಂದು ವಾರದಿಂದ ಇನ್ನೊಂದು ವಾರಕ್ಕೆ ವರದಿಯಾಗುತ್ತಿರುವ ಕೊರೊನಾ ಕೇಸ್ಗಳಲ್ಲಿ ಗಣನೀಯ ಏರಿಕೆ ಕಂಡು ಬರ್ತಿದೆ.
ರವಿವಾರ ಭಾರತದಲ್ಲಿ 47 ಸಾವಿರಕ್ಕೂ ಅಧಿಕ ಕೊರೊನಾ ಕೇಸ್ಗಳು ಬೆಳಕಿಗೆ ಬಂದಿದೆ. ಕಳೆದ 130 ದಿನಗಳಲ್ಲಿ ಇದು ಅಧಿಕ ಕೊರೊನಾ ಕೇಸ್ ವರದಿಯಾದ ದಿನವಾಗಿದೆ. ಕಳೆದ ವರ್ಷ ನವೆಂಬರ್ನಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊರೊನಾ ಕೇಸ್ಗಳು ವರದಿಯಾಗಿದ್ದವು. ಕಳೆದ ವರ್ಷದಂತೆ ಈ ವರ್ಷ ಕೂಡ ಕೊರೊನಾದಿಂದ ಮಹಾರಾಷ್ಟ್ರ ಬಹುದೊಡ್ಡ ಪೆಟ್ಟು ತಿನ್ನುತ್ತಿದೆ. ರವಿವಾರ ಮಹಾರಾಷ್ಟ್ರದಲ್ಲಿ 30 ಸಾವಿರಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿವೆ.
ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣೋದ್ರ ಜೊತೆ ಜೊತೆಗೆ ಸಾವಿನ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಕೊರೊನಾದಿಂದಾಗಿ 213 ಮಂದಿ ಸಾವಿಗೀಡಾಗಿದ್ದಾರೆ. 13 ಜನವರಿ ಬಳಿಕ ಇದೇ ಮೊದಲ ಬಾರಿಗೆ ಸಾವಿನ ಸಂಖ್ಯೆ 200ರ ಗಡಿ ದಾಟಿದೆ. ಕಳೆದ 72 ದಿನಗಳಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಅಧಿಕ ಪ್ರಮಾಣದಲ್ಲಿ ಕೊರೊನಾ ಸಾವಿನ ಸಂಖ್ಯೆ ದಾಖಲಾಗಿದೆ. ಮಹಾರಾಷ್ಟ್ರ 99, ಪಂಜಾಬ್ 44, ಕೇರಳ 13 , ಛತ್ತೀಸಗಢ 10 ಹಾಗೂ ತಮಿಳುನಾಡಿನಲ್ಲಿ 9 ಮಂದಿ ಸಾವಿಗೀಡಾಗಿದ್ದಾರೆ.