ಕೊರೊನಾ ಸೋಂಕು ಹೆಚ್ಚಾಗ್ತಿದ್ದಂತೆ ಲಕ್ಷಣಗಳ ಪಟ್ಟಿ ದೊಡ್ಡದಾಗ್ತಿದೆ. ಕೊರೊನಾ ಹೊಸ ಅಲೆ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. ಸಾಮಾನ್ಯವಾಗಿ ಕೊರೊನಾದ ಮೊದಲ ಲಕ್ಷಣ ಜ್ವರ. ಇದ್ರ ಜೊತೆಗೆ ಮತ್ತೊಂದಿಷ್ಟು ಲಕ್ಷಣಗಳು ಈ ಬಾರಿ ಕಾಡುತ್ತಿವೆ.
ಗಂಟಲು ನೋವು, ಕಿರಿಕಿರಿ, ಉರಿ ಇದು ಕೊರೊನಾದ ಲಕ್ಷಣ ಎನ್ನಲಾಗ್ತಿದೆ. ವಿಶ್ವದಾದ್ಯಂತ ಶೇಕಡಾ 52ರಷ್ಟು ಪ್ರಕರಣದಲ್ಲಿ ಈ ಲಕ್ಷಣ ಕಂಡು ಬಂದಿದೆ. ಗಂಟಲು ತುರಿಕೆ ಕೂಡ ಕಾಣಿಸಿಕೊಳ್ಳಬಹುದು. ಆಹಾರ, ನೀರು ನುಂಗುವಾಗ ಸಮಸ್ಯೆ ಎದುರಾಗುತ್ತದೆ. ಧ್ವನಿ ಬದಲಾವಣೆ ಹಾಗೂ ಊದುವ ಸಮಸ್ಯೆ ಕೂಡ ಕಾಡುವ ಸಾಧ್ಯತೆಯಿದೆ.
ಕೆಮ್ಮು ಮತ್ತು ಗಂಟಲು ನೋವಿನ ಜೊತೆ ಯುಕೆ ತಜ್ಞರು ಆಯಾಸವನ್ನು ಒಂದು ಲಕ್ಷಣವೆಂದಿದ್ದಾರೆ. ಸೋಂಕಿನ ಆರಂಭಿಕ ಚಿಹ್ನೆ ಆಯಾಸವೆಂದು ವರದಿ ಮಾಡಿದ್ದಾರೆ. ಎಲ್ಲ ವೈರಲ್ ಸೋಂಕಿನಲ್ಲಿ ಆಯಾಸವು ಸಾಮಾನ್ಯ ಸಂಕೇತವಾಗಿದ್ದರೂ, ಕೊರೊನಾ ಪ್ರಕರಣಗಳಲ್ಲಿ ಅದನ್ನು ನಿಭಾಯಿಸುವುದು ಬಹಳ ಕಷ್ಟ.
ಸ್ನಾಯು ನೋವುಗಳನ್ನು ಪ್ರಾಥಮಿಕ ಲಕ್ಷಣವೆನ್ನಲಾಗಿದೆ. ಸ್ನಾಯು ನೋವು, ಕೀಲು ನೋವು, ದೇಹದ ನೋವು ವಿಪರೀತವಾಗಿರುತ್ತದೆ. ಉರಿಯೂತವು ಸೋಂಕಿನ ಸಮಯದಲ್ಲಿ ಕೀಲು ನೋವು, ದೌರ್ಬಲ್ಯ ಮತ್ತು ದೇಹದ ನೋವಿಗೆ ಕಾರಣವಾಗುತ್ತದೆ.
ವಾಕರಿಕೆ ಮತ್ತು ವಾಂತಿ ಸೋಂಕಿನ ಲಕ್ಷಣಗಳಾಗಿವೆ. ಅನೇಕ ಸಂದರ್ಭಗಳಲ್ಲಿ ತಲೆಸುತ್ತು, ಆಯಾಸ, ವಾಕರಿಕೆ ಕೊರೊನಾ ಲಕ್ಷಣವಾಗಿದೆ. ದಣಿವಿಗೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚುವುದು ಕಷ್ಟವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಕಿವಿ ನೋವು, ಚರ್ಮದ ಸೋಂಕು ಮುಂತಾದ ಕೆಲವು ಲಕ್ಷಣಗಳು ವಿರಳವಾಗಿ ಕಂಡುಬಂದಿದೆ. ಆದ್ರೆ ಅವುಗಳನ್ನೂ ನಿರ್ಲಕ್ಷ್ಯ ಮಾಡುವಂತಿಲ್ಲ ಎಂದು ವೈದ್ಯರು ಹೇಳಿದ್ದಾರೆ.