
ಕೊರೊನಾ ಕಾಲದಲ್ಲಿ ಮಾಸ್ಕ್ ಇಲ್ಲದೆ ಹೊರ ಬೀಳುವುದು ಬಲು ಅಪಾಯಕಾರಿ. ಜೊತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸಹ ಅಷ್ಟೇ ಮುಖ್ಯವಾಗುತ್ತದೆ. ಹೀಗಾಗಿ ಸಾರ್ವಜನಿಕರೆಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಅಡ್ಡಾಡುತ್ತಿದ್ದಾರೆ.
ಮಾಸ್ಕ್ ಗಳಲ್ಲೂ ಹಲವು ವಿಧಗಳಿದ್ದು, ಕೆಲವರು ಬಟ್ಟೆಯಿಂದ ತಯಾರಿಸಿದ ಮಾಸ್ಕ್ ಧರಿಸಿದರೆ ಮತ್ತೆ ಹಲವರು ಸರ್ಜಿಕಲ್ ಮಾಸ್ಕ್ ಧರಿಸುತ್ತಾರೆ. ಅದರಲ್ಲೂ ಎನ್ 95 ಮಾಸ್ಕ್ ಗಳಿಗೆ ಹೆಚ್ಚಿನ ಬೇಡಿಕೆ ಇದೆ.
ಇದರ ಮಧ್ಯೆ ವ್ಯಕ್ತಿಯೊಬ್ಬರು ಬೆಳ್ಳಿಯಿಂದ ತಯಾರಿಸಿದ ಮಾಸ್ಕ್ ಧರಿಸುವ ಮೂಲಕ ಸುದ್ದಿಯಾಗಿದ್ದರು. ಇದೀಗ ಮತ್ತೊಬ್ಬ ವ್ಯಕ್ತಿ ಬಂಗಾರದ ಮಾಸ್ಕ್ ಹಾಕಿಕೊಳ್ಳುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
ಪುಣೆಯ ಪಿಂಪ್ರಿ ಚಿಂಚ್ವಾಡಾದ ಶಂಕರ್ ಎಂಬವರು ಬರೋಬ್ಬರಿ 2.89 ಲಕ್ಷ ರೂಪಾಯಿ ಖರ್ಚು ಮಾಡಿ ಈ ಬಂಗಾರದ ಮಾಸ್ಕ್ ಮಾಡಿಸಿಕೊಂಡಿದ್ದು, ಇದರಲ್ಲಿ ತೆಳುವಾದ ರಂಧ್ರವಿರುವ ಕಾರಣ ಉಸಿರಾಟಕ್ಕೆ ತೊಂದರೆ ಆಗುವುದಿಲ್ಲ ಎಂದಿದ್ದಾರೆ.