ನವದೆಹಲಿ: ತೀವ್ರ ಆತಂಕ ಮೂಡಿಸುತ್ತಿರುವ ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಲಸಿಕೆ ಕಂಡು ಹಿಡಿಯಲಾಗುತ್ತಿದ್ದು, ಅನೇಕ ಪ್ರಯೋಗಗಳು ಅಂತಿಮ ಹಂತದಲ್ಲಿವೆ.
ಇದೇ ವೇಳೆ ದೇಶದ ಜನರಿಗೆ ಶುಭ ಸುದ್ದಿ ಸಿಕ್ಕಿದೆ. ದೇಶದ ಹೆಚ್ಚಿನ ಸಂಖ್ಯೆಯ ಜನರಲ್ಲಿ ಕೊರೊನಾ ವಿರುದ್ಧ ಹೋರಾಡುವ ಪ್ರತಿಕಾಯಗಳ ಬೆಳವಣಿಗೆ ಆಗಿದೆ. ಕೊರೊನಾ ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕೆಂದು ವೈದ್ಯರು ಸಲಹೆ ನೀಡಿದ್ದರು.
ದೇಶದ ಪ್ರತಿ ನಾಲ್ವರ ಪೈಕಿ ಒಬ್ಬರಲ್ಲಿ ಕೊರೊನಾ ವಿರುದ್ಧ ಹೋರಾಡುವ ಪ್ರತಿಕಾಯಗಳು ಪತ್ತೆಯಾಗಿವೆ. ಶೇಕಡ 25 ರಷ್ಟು ಜನರಲ್ಲಿ ರೋಗ ನಿರೋಧಕ ಕಾಯಗಳು ಪತ್ತೆಯಾಗಿವೆ. ಪುಣೆಯಲ್ಲಿ ಶೇಕಡ 51 ರಷ್ಟು ಜನರಿಗೆ ರೋಗ ನಿರೋಧಕ ಶಕ್ತಿ ಇದೆ. ಕೊರೊನಾ ಸೋಂಕು ತಡೆಯುವ ಪ್ರತಿಕಾಯಗಳು ಇವರಲ್ಲಿ ಕಂಡುಬಂದಿವೆ ಎಂದು ಅಧ್ಯಯನದಲ್ಲಿ ಗೊತ್ತಾಗಿದೆ.
ಅದೇ ರೀತಿ ಮುಂಬೈ ಸ್ಲಂಗಳಲ್ಲಿ ಶೇಕಡ 51 ರಷ್ಟು ಜನರಲ್ಲಿ ರೋಗ ನಿರೋಧಕ ಶಕ್ತಿ ಇರುವುದು ಗೊತ್ತಾಗಿದೆ. ದೆಹಲಿಯ ಸೆರಾಲಾಜಿಕಲ್ ಸರ್ವೆಯಲ್ಲಿ ಶೇಕಡ 29 ಜನರಿಗೆ ಪ್ರತಿರೋಧಕ ಶಕ್ತಿ ಬಳವಣಿಗೆಯಾಗಿರುವುದು ಕಂಡುಬಂದಿದೆ.
ಯಾವುದೇ ವೈರಸ್ ವಿರುದ್ಧ ದೇಹವು ಹೋರಾಡಲು ವೈರಸ್ ಗಳನ್ನು ಕೊಲ್ಲುವ ಪ್ರತಿಕಾಯ ಹೆಚ್ಚಾಗಿರಬೇಕು. ಇಂತಹ ಪ್ರತಿಕಾಯಗಳ ಬೆಳವಣಿಗೆ ಆಗುವುದರಿಂದ ವೈರಸ್ ಗಳಿಗೆ ಉಳಿಗಾಲ ಇರುವುದಿಲ್ಲ. ಅದೇ ರೀತಿ ಕೊರೊನಾ ಸೋಂಕು ತಗಲಿದರೆ ಏನೂ ಆಗುವುದಿಲ್ಲ. ದೇಶದ ನಾಲ್ವರಲ್ಲಿ ಒಬ್ಬರಿಗೆ ಕೊರೊನಾ ಸೋಂಕಿನ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿ ಬೆಳವಣಿಗೆಯಾಗಿದೆ ಎಂದು ಹೇಳಲಾಗಿದೆ.