ಭುವನೇಶ್ವರ: ಕೊರೊನಾ ಸೋಂಕು ವ್ಯಾಪಕವಾಗಿ ಏರಿಕೆಯಾಗುತ್ತಿದ್ದು ಲಸಿಕೆ ಅಭಿವೃದ್ಧಿಪಡಿಸುವ ಪ್ರಯತ್ನಗಳು ಮುಂದುವರೆದಿವೆ. ಮುಂದಿನ ದಿನಗಳಲ್ಲಿ ಕಡಿಮೆಯಾಗಬಹುದೆಂದು ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಮಳೆಗಾಲ, ಚಳಿಗಾಲದಲ್ಲಿ ಕೊರೋನಾ ಸೋಂಕು ಹೆಚ್ಚಾಗಲಿದೆ ಎಂದು ಹೇಳಲಾಗಿದೆ.
ಮಳೆ ಮತ್ತು ಶೀತ ವಾತಾವರಣ ಸೋಂಕು ಹೆಚ್ಚಳಕ್ಕೆ ಅನುಕೂಲಕರವಾಗುತ್ತದೆ ಎಂದು ಐಐಟಿ ಮತ್ತು ಏಮ್ಸ್ ಅಧ್ಯಯನದಲ್ಲಿ ಗೊತ್ತಾಗಿದೆ. ಭುವನೇಶ್ವರದ ಐಐಟಿ ಮತ್ತು ಏಮ್ಸ್ ಜಂಟಿಯಾಗಿ ನಡೆಸಿದ ಅಧ್ಯಯನದಲ್ಲಿ ಮಳೆ ಮತ್ತು ತಾಪಮಾನ ಇಳಿಕೆ, ಶೀತದ ವಾತಾವರಣ ಕೊರೊನಾ ಸೋಂಕು ಹೆಚ್ಚಾಗಿ ಹರಡಲು ಕಾರಣವಾಗುತ್ತದೆ. ತಾಪಮಾನ ಏರಿಕೆಯಿಂದ ವೈರಸ್ ಹರಡುವುದು ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ.
ಆರ್ದ್ರತೆ ಹೆಚ್ಚಾದರೆ ಕೊರೋನಾ ಪ್ರಕರಣಗಳು ಜಾಸ್ತಿ ಆಗುವ ಸಾಧ್ಯತೆ ಇದೆ. ಕಳೆದ ಏಪ್ರಿಲ್ ನಿಂದ ಜೂನ್ ಅವಧಿಯಲ್ಲಿ ಭಾರತದ 28 ರಾಜ್ಯಗಳಲ್ಲಿ ವಾತಾವರಣದಲ್ಲಿ ಸೋಂಕಿನ ಬೆಳವಣಿಗೆ ಆಧರಿಸಿ ಅಧ್ಯಯನ ನಡೆಸಲಾಗಿದೆ. ಅಧ್ಯಯನದಲ್ಲಿ ಕಂಡು ಕೊಂಡ ಮಾಹಿತಿಯಂತೆ ಮಳೆ ಮತ್ತು ಶೀತದ ವಾತಾವರಣ ಕೊರೋನಾ ಹರಡಲು ಅನುಕೂಲವಾಗಲಿದೆ.