ಕೋವಿಡ್-19 ವೈರಾಣುಗಳಿಂದ ಶ್ವಾಸಕೋಶಕ್ಕಿಂತ ಮೆದುಳಿಗೆ ಹಾನಿಯಾಗುವ ಸಾಧ್ಯತೆಗಳೇ ಹೆಚ್ಚು ಎಂದು ಸಂಶೋಧಕರು ತಿಳಿಸಿದ್ದಾರೆ.
ಭಾರತೀಯ ಮೂಲದ ಸಂಶೋಧಕರನ್ನೂ ಒಳಗೊಂಡ ಈ ತಂಡವು ಇಲಿಗಳ ಮೇಲೆ ಕೋವಿಡ್-19 ವೈರಾಣುಗಳನ್ನು ಬಿಟ್ಟು ಪ್ರಯೋಗ ಮಾಡಿ ಈ ಅಂಶ ಕಂಡುಕೊಂಡಿದ್ದಾರೆ.
ವೈರಾಣುಗಳ ದಾಳಿಯಿಂದ ಶ್ವಾಸಕೋಶಗಳು ತಮ್ಮನ್ನು ತಾವು ಶುದ್ಧ ಮಾಡಿಕೊಳ್ಳುತ್ತಿದ್ದರೂ ಸಹ ಕ್ರಮೇಣ ಈ ವೈರಸ್‌ಗಳು ಅವುಗಳ ಮೆದುಳಿಗೆ ದಾಳಿ ಮಾಡಲು ಮುಂದಾದ ವಿಷಯವನ್ನು ಸಂಶೋಧಕರು ತಿಳಿಸಿದ್ದಾರೆ.
“ಈ ವೈರಾಣುಗಳು ಕೇವಲ ಶ್ವಾಸಕೋಶಕ್ಕೆ ಮಾತ್ರ ಹಾನಿ ಮಾಡುವುದಿಲ್ಲ. ಒಮ್ಮೆ ಮೆದುಳಿಗೆ ಇವು ದಾಳಿ ಮಾಡಿದಲ್ಲಿ, ಶ್ವಾಸಕೋಶ, ಹೃದಯ ಸೇರಿದಂತೆ ಯಾವುದೇ ಅಂಗವನ್ನೂ ಸಹ ಹಾನಿ ಮಾಡಬಲ್ಲವು. ಮೆದುಳು ಬಹಳ ಸೂಕ್ಷ್ಮವಾದ ಅಂಗ. ದೇಹದ ಪ್ರತಿಯೊಂದು ಚಟುವಟಿಕೆಯ ಕೇಂದ್ರ ಸಂಸ್ಕರಣಾ ವಿಭಾಗ ಈ ಮೆದುಳು” ಎಂದು ಮುಖ್ಯ ಸಂಶೋಧಕ ಹಾಗೂ ಜಾರ್ಜಿಯಾ ಸ್ಟೇಟ್ ವಿವಿಯ ಸಹ ಪ್ರಾಂಶುಪಾಲರಾದ ಮುಖೇಶ್ ಕುಮಾರ್ ತಿಳಿಸಿದ್ದಾರೆ. ಅಧ್ಯಯನದ ವರದಿಯು ವೈರಸಸ್ ಎಂಬ ವೃತ್ತಪತ್ರಿಕೆಯಲ್ಲಿ ಪ್ರಕಟವಾಗಿದೆ.