ನವದೆಹಲಿ: ಕೊರೋನಾ ಸೋಂಕಿನ ಕುರಿತಾಗಿ ನಿರ್ಲಕ್ಷ್ಯ ವಹಿಸಿದರೆ ಮಾಸಿಕ 26 ಲಕ್ಷದವರೆಗೆ ಹೊಸ ಕೇಸ್ ದಾಖಲಾಗಬಹುದಾದ ಸಾಧ್ಯತೆ ಇದೆ.
ಚಳಿಗಾಲ ಮತ್ತು ಹಬ್ಬದ ಸೀಸನ್ ನಲ್ಲಿ ಎಚ್ಚರ ತಪ್ಪಿದರೆ ಸೋಂಕು ತೀವ್ರತರವಾಗಿ ಏರಿಕೆಯಾಗುತ್ತದೆ. ಇದರೊಂದಿಗೆ ಸಾವಿನ ಪ್ರಮಾಣದಲ್ಲಿಯೂ ಏರಿಕೆಯಾಗಬಹುದು ಎಂದು ಹೇಳಲಾಗಿದೆ.
ಕೇಂದ್ರದ ಅಧ್ಯಯನ ಸಮಿತಿ ಈ ಕುರಿತಂತೆ ಎಚ್ಚರಿಕೆ ನೀಡಿದ್ದು, ಮುಂದಿನ ಫೆಬ್ರವರಿ ವೇಳೆಗೆ ಕೊರೋನಾ ನಿಯಂತ್ರಣಕ್ಕೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ಚಳಿಗಾಲ, ಹಬ್ಬದ ಸಂದರ್ಭದಲ್ಲಿ ಜನ ಮೈಮರೆತರೆ ಕೊರೋನಾ ಸೋಂಕು ಹೆಚ್ಚಾಗಬಹುದು. ಯೂರೋಪ್ ದೇಶಗಳಲ್ಲಿ ಚಳಿಗಾಲದಲ್ಲಿ ಕೊರೋನಾ ಎರಡನೇ ಅಲೆ ಹೆಚ್ಚಾಗಿತ್ತು. ಭಾರತದಲ್ಲಿಯೂ ಚಳಿಗಾಲದಲ್ಲಿ ಸೋಂಕು ಹೆಚ್ಚಾಗಬಹುದು ಎಂದು ಕೋವಿಡ್ ಸಮನ್ವಯ ಸಮಿತಿ ಮುಖ್ಯಸ್ಥ ವಿ.ಕೆ. ಪೌಲ್ ಎಚ್ಚರಿಕೆ ನೀಡಿದ್ದಾರೆ.
ಚಳಿಗಾಲದಲ್ಲಿ ವೈರಸ್ ಹೆಚ್ಚಳವಾಗುವುದು, ಜ್ವರ ಬರುವುದು ಸಾಮಾನ್ಯ. ಈ ವೇಳೆ ಕೊರೋನಾ ಸೋಂಕು ಕೂಡ ಹೆಚ್ಚಾಗಬಹುದು. ಉಸಿರಾಟದ ತೊಂದರೆ ಇಟ್ಟವರಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಹಬ್ಬದ ಸೀಸನ್ ಆಗಿರುವುದರಿಂದ ಜನರ ಓಡಾಟ ಹೆಚ್ಚಾಗುತ್ತದೆ. ಇವೆಲ್ಲಾ ಕಾರಣಗಳಿಂದ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಲಾಗಿದೆ.