ನವದೆಹಲಿ: ಡಿಸೆಂಬರ್ ವೇಳೆಗೆ ಭಾರತದಲ್ಲಿ ಕೊರೋನಾ ಲಸಿಕೆ ಲಭ್ಯವಾಗಲಿದೆ. ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಕೋವಿಶೀಲ್ಡ್ ಲಸಿಕೆಯ ತುರ್ತು ಬಳಕೆಗೆ ಸಿಗುವ ಸಾಧ್ಯತೆ ಇದೆ. ಪುಣೆಯ ಸೇರಂ ಇನ್ ಸ್ಟಿಟ್ಯೂಟ್ ಮುಖ್ಯಸ್ಥ ಆದಾರ್ ಪೂನಾವಾಲಾ ಈ ಬಗ್ಗೆ ಸುಳಿವು ನೀಡಿದ್ದಾರೆ.
ಕೊರೋನಾ ಸೋಂಕು ತಡೆಯುವ ನಿಟ್ಟಿನಲ್ಲಿ ಬ್ರಿಟನ್ ನ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನಿಕಾ ಕಂಪನಿ ಅಭಿವೃದ್ಧಿಪಡಿಸಿರುವ ಕೊರೋನಾ ಲಸಿಕೆ ಕೋವಿಶೀಲ್ಡ್ ಭಾರತದಲ್ಲಿ ಡಿಸೆಂಬರ್ ವೇಳೆಗೆ ತುರ್ತು ಬಳಕೆಗೆ ಲಭ್ಯವಾಗಬಹುದು.
ಪುಣೆಯ ಸೇರಂ ಇನ್ಸ್ ಸ್ಟಿಟ್ಯೂಟ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಆದಾರ್ ಪೂನಾವಾಲಾ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಸುಳಿವು ನೀಡಿದ್ದಾರೆ.
ಭಾರತದಲ್ಲಿ ಪ್ರಯೋಗಗಳು ಡಿಸೆಂಬರ್ ಅಂತ್ಯಕ್ಕೆ ಪೂರ್ಣವಾಗಲಿದ್ದು ಜನವರಿಯಲ್ಲಿ ಲೈಸೆನ್ಸ್ ಗೆ ಅರ್ಜಿ ಸಲ್ಲಿಸಬಹುದು. ಆದರೆ, ಬ್ರಿಟನ್ ನಲ್ಲಿ ಮೂರನೇ ಹಂತದ ಪರೀಕ್ಷೆ ಅಂತಿಮ ಹಂತದ ಪ್ರಕ್ರಿಯೆಯಲ್ಲಿದೆ. ಲಸಿಕೆ ಸುರಕ್ಷಿತವಾಗಿದೆ ಎನ್ನುವುದು ಗೊತ್ತಾಗಿದೆ. ಭಾರತೀಯರಿಗೂ ಲಸಿಕೆ ನೀಡಲು ಅನುಮತಿ ಕೋರಿ ತುರ್ತು ಲೈಸೆನ್ಸ್ ಗೆ ಅರ್ಜಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಕೈಗೆಟಕುವ ದರದಲ್ಲಿ ಲಸಿಕೆ ನೀಡಲಾಗುವುದು. ಮೊದಲು ಆರೋಗ್ಯ ಕಾರ್ಯಕರ್ತರಿಗೆ, ವೃದ್ಧರಿಗೆ, ತೀವ್ರ ಆರೋಗ್ಯ ಸಮಸ್ಯೆ ಇರುವ ರೋಗಿಗಳಿಗೆ ಲಸಿಕೆ ನೀಡಲಾಗುವುದು ಎಂದು ಹೇಳಲಾಗಿದೆ.