ವಿಶ್ವದ ಅತಿದೊಡ್ಡ ಕೊರೊನಾ ವೈರಸ್ ವ್ಯಾಕ್ಸಿನೇಷನ್ ಅಭಿಯಾನ ದೇಶದಲ್ಲಿ ಪ್ರಾರಂಭವಾಗಿದೆ. ಜನವರಿ 16 ರಂದು ದೇಶದಲ್ಲಿ ಕೊರೊನಾ ಲಸಿಕೆ ಪ್ರಕ್ರಿಯೆ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶದಲ್ಲಿ ಕೋವಿಡ್ -19 ಲಸಿಕೆ ಅಭಿಯಾನದ ಮೊದಲ ಹಂತವನ್ನು ಪ್ರಾರಂಭಿಸಿದ್ದಾರೆ.
ಕೊರೊನಾ ಲಸಿಕೆ ಅಭಿಯಾನ ಶುರುವಾಗಿದ್ರೂ ಲಸಿಕೆ ತೆಗೆದುಕೊಂಡವರು ಹಾಗೂ ಲಸಿಕೆ ತೆಗೆದುಕೊಳ್ಳುವವರು ಮೈ ಮರೆಯುವಂತಿಲ್ಲ. ಮೊದಲಿನಂತೆಯೇ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಕೊರೊನಾ ಲಸಿಕೆ ಬಂದ್ರೂ ಮಾರ್ಗಸೂಚಿ ಪಾಲನೆ ಮಾಡಬೇಕೆಂದು ಆರೋಗ್ಯ ಸಚಿವಾಲಯ ಹೇಳಿದೆ.
ಕೊರೊನಾ ಲಸಿಕೆ ಬಂದಿದೆ ಎನ್ನುವ ಕಾರಣಕ್ಕೆ ಮಾಸ್ಕ್ ಮರೆಯುವಂತಿಲ್ಲ. ಲಸಿಕೆ ಪಡೆದ ನಂತರವೂ ಮಾಸ್ಕ್ ಹಾಕುವುದು ಕಡ್ಡಾಯವಾಗಿರುತ್ತದೆ. ಕೊರೊನಾ ಲಸಿಕೆಯನ್ನು ಇಡೀ ದೇಶದ ಜನರಿಗೆ ಹಾಕಲು ಒಂದು ವರ್ಷಕ್ಕಿಂತ ಹೆಚ್ಚು ಸಮಯ ಹಿಡಿಯುತ್ತದೆ.ಪ್ರತಿಯೊಬ್ಬರೂ ಕೊರೊನಾ ಲಸಿಕೆ ಪಡೆಯುವವರೆಗೆ ಅಪಾಯವಿರುತ್ತದೆ.
ಲಸಿಕೆ, ರೋಗನಿರೋಧಕ ಶಕ್ತಿ ಹೊಂದಿರುವ ಜನರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇದಕ್ಕಾಗಿಯೇ ತಜ್ಞರು ಲಸಿಕೆ ಮೊದಲು ಮತ್ತು ನಂತರ ಮದ್ಯ ಸೇವನೆ ಮಾಡಬಾರದೆಂದು ಸಲಹೆ ನೀಡಿದ್ದಾರೆ. ತಜ್ಞರ ಪ್ರಕಾರ, ಲಸಿಕೆ ಹಾಕಿದ ನಂತರ ಜನರು ಕನಿಷ್ಠ 45 ದಿನಗಳವರೆಗೆ ಆಲ್ಕೊಹಾಲ್ ಸೇವಿಸಬಾರದು. ಆಲ್ಕೊಹಾಲ್ ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಈ ಕಾರಣದಿಂದಾಗಿ ಲಸಿಕೆ ಅದರ ಪರಿಣಾಮವನ್ನು ಸರಿಯಾಗಿ ತೋರಿಸಲು ಸಾಧ್ಯವಾಗುವುದಿಲ್ಲ.
ಎರಡೂ ಡೋಸ್ ತೆಗೆದುಕೊಂಡ ನಂತರ, ಲಸಿಕೆ ತೆಗೆದುಕೊಂಡ ವ್ಯಕ್ತಿ ಕೋವಿಡ್ -19 ರೋಗಿಗಳನ್ನು ನೋಡಿಕೊಳ್ಳಬಹುದು. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ.
ಕೊರೊನಾ ಲಸಿಕೆ ಹಾಕಿಸಿಕೊಳ್ಳುವವರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಆರು ಅಡಿಗಳ ಅಂತರವು ಸೋಂಕನ್ನು ತಡೆಗಟ್ಟಲು ಉತ್ತಮ ಮಾರ್ಗವಾಗಿದೆ.