ಸೆಪ್ಟೆಂಬರ್ ಅಂತ್ಯಕ್ಕೆ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರಬಹುದೆಂಬ ಅಂದಾಜು ಹುಸಿಯಾಗಿದ್ದು ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ನವೆಂಬರ್ ವೇಳೆಗೂ ಸೋಂಕು ಕಡಿಮೆಯಾಗುವ ಸಾಧ್ಯತೆ ಇಲ್ಲವೆಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಯುರೋಪ್ ರಾಷ್ಟ್ರಗಳಲ್ಲಿ ಮತ್ತು ಕೊಲ್ಲಿ ದೇಶಗಳಲ್ಲಿ ಎರಡನೆಯ ಅಲೆ ಶುರುವಾಗಿದೆ. ದೇಶದ ಅನೇಕ ರಾಜ್ಯಗಳಲ್ಲಿಯೂ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ.
ಪ್ರಮುಖವಾಗಿ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಉತ್ತರಪ್ರದೇಶ, ಕೇರಳ, ಪಂಜಾಬ್ ರಾಜ್ಯಗಳಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಅನ್ಲಾಕ್ ನಂತರದಲ್ಲಿ ಜನ ಎಚ್ಚರ ತಪ್ಪಿ ಸುರಕ್ಷತೆ ಇಲ್ಲದೆ ಓಡಾಟ ನಡೆಸುತ್ತಿರುವುದು ಸೋಂಕು ವ್ಯಾಪಕವಾಗಿ ಹರಡಲು ಕಾರಣವೆಂದು ಹೇಳಲಾಗಿದೆ.
ರಾಷ್ಟ್ರೀಯ ಕೊರೊನಾ ಟಾಸ್ಕ್ ಫೋರ್ಸ್ ಸದಸ್ಯ, ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ, ಎರಡನೇ ಹಂತದ ಕೊರೊನಾ ಅಲೆ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.