ನವದೆಹಲಿ: ದೇಶದೆಲ್ಲೆಡೆ ಆತಂಕ ಮೂಡಿಸಿರುವ ಕೊರೊನಾ ಸೋಂಕು ತಡೆಗೆ ಆಗಸ್ಟ್ 15 ರ ವೇಳೆಗೆ ಕೊವ್ಯಾಕ್ಸಿನ್ ರೋಗ ನಿರೋಧಕ ಚುಚ್ಚುಮದ್ದು ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿತ್ತು.
ಐಸಿಎಂಆರ್ ಕೂಡ ಈ ಬಗ್ಗೆ ಮಾಹಿತಿ ನೀಡಿ ಆಗಸ್ಟ್ 15ರ ವೇಳೆಗೆ ಕಾಕ್ಸಿನ್ ಬಿಡುಗಡೆ ಮಾಡುವುದಾಗಿ ತಿಳಿಸಿತ್ತು. ಆದರೆ, ದೇಶದ ಜನತೆಗೆ ನಿರಾಸೆಯ ಸುದ್ದಿ ಹೊರಬಿದ್ದಿದೆ. 2021 ರ ವರೆಗೆ ಲಸಿಕೆಗೆ ಕಾಯುವಂತೆ ಕೇಂದ್ರ ವಿಜ್ಞಾನ ಸಚಿವಾಲಯ ತಿಳಿಸಿದೆ.
ಕೊರೊನಾ ಸೋಂಕು ತಡೆಗೆ ಅಭಿವೃದ್ಧಿಪಡಿಸಲಾದ ಕೊವ್ಯಾಕ್ಸಿನ್ ಆಗಸ್ಟ್ 15 ರ ವೇಳೆಗೆ ಬಿಡುಗಡೆ ಮಾಡಲು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು ಮುಂದಾಗಿರುವುದು ವಿವಾದಕ್ಕೆ ಕಾರಣವಾಗಿ ತಜ್ಞರು ಆಕ್ರೋಶ ವ್ಯಕ್ತಪಡಿಸಿ ಲಸಿಕೆಯನ್ನು ಆತುರದಲ್ಲಿ ಬಿಡುಗಡೆ ಮಾಡುವ ಮೂಲಕ ಜನರ ಜೀವವನ್ನೇ ಪಣಕ್ಕೆ ಇಡಲು ಹೊರಟಂತಿದೆ ಎಂದು ಹೇಳಿದ್ದಾರೆ.
ಹೀಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು ಸ್ಪಷ್ಟನೆ ನೀಡಿದ್ದು, ಜನರಿಗೆ ಆದಷ್ಟು ಬೇಗ ಕೊರೋನಾ ಲಸಿಕೆ ಸಿಗುವಂತೆ ಮಾಡಲು ಜಾಗತಿಕ ನಿಯಮಗಳಿಗೆ ಅನುಗುಣವಾಗಿ ಕ್ಲಿನಿಕಲ್ ಟ್ರಯಲ್ ನಡೆಸಲಾಗುತ್ತಿದೆ. ಜನರ ರಕ್ಷಣೆಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲವೆಂದು ತಿಳಿಸಿತ್ತು.
ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ ಕೊವ್ಯಾಕ್ಸಿನ್ ರೋಗನಿರೋಧಕ ಚುಚ್ಚುಮದ್ದು ಆಗಸ್ಟ್ 15ಕ್ಕೆ ಬಿಡುಗಡೆಯಾಗಲ್ಲ, 2021 ರ ವರೆಗೆ ಕಾಯಬೇಕು ಎಂದು ಹೇಳಲಾಗಿದೆ. ಜೈಡಲ್ ಕ್ಯಾಡಿಲಾ ಹೆಲ್ತ್ ಕೇರ್ ನ ಜೈಕೋವ್ –ಡಿ ಸೇರಿದಂತೆ ಸುಮಾರು 140ಕ್ಕೂ ಹೆಚ್ಚು ಕೊರೋನಾ ರೋಗ ನಿರೋಧಕ ಚುಚ್ಚುಮದ್ದುಗಳ ಪ್ರಯೋಗ ಪರೀಕ್ಷೆಗಳು ವಿವಿಧ ಹಂತದಲ್ಲಿದ್ದು 2021 ಕ್ಕಿಂತ ಮೊದಲೇ ಇವುಗಳು ಬಿಡುಗಡೆಯಾಗುವ ಸಾಧ್ಯತೆ ಇಲ್ಲ. ಸಂಪೂರ್ಣ ಪರೀಕ್ಷೆಗೊಳಪಟ್ಟು ಅನುಮೋದನೆಯೊಂದಿಗೆ ರೋಗ ನಿರೋಧಕ ಚುಚ್ಚುಮದ್ದುಗಳು ಮಾರುಕಟ್ಟೆಗೆ ಬಿಡುಗಡೆಯಾಗಲಿವೆ. ಅಲ್ಲಿಯವರೆಗೂ ಕಾಯುವುದು ಅನಿವಾರ್ಯವಾಗಿದೆ.