ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. ದೇಶದ ಆರ್ಥಿಕತೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಹಂತಹಂತವಾಗಿ ಲಾಕ್ಡೌನ್ ಸಡಿಲಿಕೆ ಮಾಡುತ್ತಿದ್ದು ಅನ್ಲಾಕ್ 5ರಲ್ಲಿ ಸಿನಿಮಾ ಮಂದಿರ ಮತ್ತು ಶಾಲೆಗಳ ಆರಂಭಕ್ಕೆ ಅವಕಾಶ ನೀಡಲಾಗಿದೆ.
ಆದರೆ, ಇದೇ ಸಂದರ್ಭದಲ್ಲಿ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಭಾರತದಲ್ಲಿ ಸೋಂಕು ವ್ಯಾಪಕವಾಗಿ ಹರಡುವಲ್ಲಿ ʼಸೈಲೆಂಟ್ ಸ್ಪ್ರೆಡ್ಡರ್ʼ ಗಳ ಪಾತ್ರ ಮಹತ್ವದಾಗಿದೆ ಎಂದು ಹೇಳಲಾಗಿದೆ.
ಮಕ್ಕಳೂ ಕೂಡಾ ಸೈಲೆಂಟ್ ಸ್ಪ್ರೆಡ್ಡರ್ ಗಳಾಗಿದ್ದಾರೆ ಎನ್ನುವುದು ಅಧ್ಯಯನದಲ್ಲಿ ಗೊತ್ತಾಗಿದೆ. ಈ ಅಧ್ಯಯನದ ವರದಿಯಿಂದ ಪೋಷಕರು ಬೆಚ್ಚಿಬಿದ್ದಿದ್ದಾರೆ. ಅಕ್ಟೋಬರ್ 15 ರ ನಂತರ ಹಂತಹಂತವಾಗಿ ಶಾಲೆಗಳನ್ನು ತೆರೆಯಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಇದನ್ನು ರಾಜ್ಯಗಳ ವಿವೇಚನೆಗೆ ಬಿಡಲಾಗಿದೆ.
ಯಾವುದೇ ರೋಗಲಕ್ಷಣ ಇಲ್ಲದ ʼಸೈಲೆಂಟ್ ಸ್ಪ್ರೆಡ್ಡರ್ʼ ಗಳಿಂದ ಕೊರೋನಾ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಪರೀಕ್ಷೆಗಳನ್ನು ಹೆಚ್ಚು ಮಾಡಬೇಕೆಂದು ತಜ್ಞರು ಶಿಫಾರಸು ಮಾಡಿದ್ದಾರೆ ಎಂದು ಹೇಳಲಾಗಿದೆ.