ಲಖ್ನೋ: ಕೇವಲ ಮದುವೆ ಉದ್ದೇಶದಿಂದ ಧಾರ್ಮಿಕ ಮತಾಂತರವಾಗುವುದು ಸ್ವೀಕಾರಾರ್ಹವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಆದೇಶಿಸಿದೆ.
ಅಂತರ್ಧರ್ಮೀಯ ವಿವಾಹವಾದ ದಂಪತಿ ರಕ್ಷಣೆ ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಯ ವಜಾಗೊಳಿಸಿದ ಅಲಹಾಬಾದ್ ಹೈಕೋರ್ಟ್ ಕೇವಲ ಮದುವೆಯ ಉದ್ದೇಶದಿಂದ ಧಾರ್ಮಿಕ ಮತಾಂತರವಾಗುವುದು ಸ್ವೀಕಾರಾರ್ಹವಲ್ಲ ಎಂದು ಅಭಿಪ್ರಾಯಪಟ್ಟಿದೆ.
ಪಶ್ಚಿಮ ಉತ್ತರಪ್ರದೇಶದ ಮುಜಾಫರ್ನಗರದ ದಂಪತಿ ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದ್ದರು. ಹುಡುಗಿಯ ತಂದೆ ದಾಂಪತ್ಯ ಜೀವನದಲ್ಲಿ ಹಸ್ತಕ್ಷೇಪ ಮಾಡದಂತೆ ನಿರ್ದೇಶಿಸಲು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅಲ್ಲದೇ ಪೊಲೀಸ್ ರಕ್ಷಣೆಯನ್ನು ಕೂಡ ಕೋರಿದ್ದರು.
ಈ ಪ್ರಕರಣದ ಅರ್ಜಿಯ ವಿಚಾರಣೆ ಆಲಿಸಿದ ನ್ಯಾಯಮೂರ್ತಿ ಮಹೇಶ್ ಚಂದ್ರ ತ್ರಿಪಾಠಿ ಅವರನ್ನೊಳಗೊಂಡ ನ್ಯಾಯಪೀಠ ಮುಸ್ಲಿಂ ಮಹಿಳೆ ಮದುವೆಗೆ ಒಂದು ತಿಂಗಳ ಮೊದಲು ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವುದನ್ನು ಗಮನಿಸಿದ್ದಾರೆ. ಈ ಮತಾಂತರ ಮದುವೆಯ ಉದ್ದೇಶದಿಂದ ಮಾತ್ರ ನಡೆದಿರುವುದು ಸ್ಪಷ್ಟವಾಗಿದೆ ಎಂದು ಹೇಳಿರುವ ನ್ಯಾಯಾಧೀಶರು, ಕೇವಲ ಮದುವೆ ಉದ್ದೇಶದ ಮತಾಂತರ ಸ್ವೀಕಾರಾರ್ಹವಲ್ಲ ಎಂದು ಹೇಳಿ ರಿಟ್ ಅರ್ಜಿಯನ್ನು ವಜಾಗೊಳಿಸಿದ್ದಾರೆ ಎನ್ನಲಾಗಿದೆ.