ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದಿಂದ ಪ್ರವಾಸೋದ್ಯಮದ ಬೊಕ್ಕಸ ತುಂಬಲಿದೆ. ಅಯೋಧ್ಯೆ ಸುತ್ತಮುತ್ತಲ ಪ್ರವಾಸಿ ಸ್ಥಳಗಳಿಗೂ ಪ್ರವಾಸಿಗರ ಭೇಟಿ ಹೆಚ್ಚಾಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡಿರುವ ಸರ್ಕಾರ ಪ್ರವಾಸಿ ಸ್ಥಳಗಳ ಅಭಿವೃದ್ಧಿಗೆ ಒತ್ತು ನೀಡ್ತಿದೆ.
ದೇಶಿ ಪ್ರವಾಸಿಗರೂ ಈಗ್ಲೂ ಧಾರ್ಮಿಕ ಪ್ರವಾಸಕ್ಕೆ ಮಾನ್ಯತೆ ನೀಡ್ತಿದ್ದಾರೆ. ಇಬ್ಬರಲ್ಲಿ ಒಬ್ಬರು ಧಾರ್ಮಿಕ ಸ್ಥಳ, ತೀರ್ಥ ಯಾತ್ರೆಗೆ ಹೋಗಲು ಆಸಕ್ತಿ ತೋರುತ್ತಾರೆ. ಹಾಗಾಗಿ ಸರ್ಕಾರ ಇದನ್ನು ಮತ್ತಷ್ಟು ಉತ್ತೇಜಿಸಲು ಪ್ರಯತ್ನಿಸುತ್ತಿದೆ. ಧಾರ್ಮಿಕ ಸ್ಥಳಗಳ ಮೂಲಸೌಕರ್ಯ ಮತ್ತು ಇತರ ಸೌಲಭ್ಯಗಳ ಅಭಿವೃದ್ಧಿಗೆ ಸರ್ಕಾರ ಮಹತ್ವ ನೀಡ್ತಿದೆ.
ಅಯೋಧ್ಯೆಯಲ್ಲಿ ಹೊಸ ವಿಮಾನ ನಿಲ್ದಾಣ ಮತ್ತು ಅತ್ಯುತ್ತಮ ರೈಲು ನಿಲ್ದಾಣವನ್ನು ನಿರ್ಮಿಸಲಾಗುವುದು. 500 ಕೋಟಿ ರೂಪಾಯಿಗಳ ಬಜೆಟ್‌ನೊಂದಿಗೆ ಉತ್ತರ ಪ್ರದೇಶ ಸರ್ಕಾರ ಹಲವಾರು ಅಭಿವೃದ್ಧಿ ಮತ್ತು ಸುಂದರೀಕರಣ ಯೋಜನೆಗಳನ್ನು ಘೋಷಿಸಿದೆ. ಈ ಯೋಜನೆಯಡಿ ಅಯೋಧ್ಯೆಯನ್ನು ಪ್ರಮುಖ ಧಾರ್ಮಿಕ ಪ್ರವಾಸಿ ತಾಣ ಮಾಡಲಾಗುವುದು. ಅಯೋಧ್ಯೆ ಹತ್ತಿರದ ಪ್ರವಾಸಿ ತಾಣಗಳ ನವೀಕರಣವೂ ನಡೆಯಲಿದೆ.
ಮೋದಿ ಸರ್ಕಾರ ಬಂದಾಗಿನಿಂದ ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವ ಪ್ರಯತ್ನಗಳು ತೀವ್ರಗೊಂಡಿವೆ. ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 15, 2019ರ ಭಾಷಣದಲ್ಲಿ ಪ್ರತಿಯೊಬ್ಬ ವ್ಯಕ್ತಿಯು 2022 ರ ವೇಳೆಗೆ 15 ದೇಶೀಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಬೇಕು ಎಂದಿದ್ದರು.