ಪುದುಚೇರಿ: ಕೇಂದ್ರಾಡಳಿತ ಪ್ರದೇಶ ಪುದುಚೇರಿ ಸಿಎಂ ವಿ. ನಾರಾಯಣಸ್ವಾಮಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನಗೊಂಡಿದೆ. ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಪಡಿಸುವಲ್ಲಿ ನಾರಾಯಣಸ್ವಾಮಿ ವಿಫಲರಾಗಿದ್ದಾರೆ.
ಕಾಂಗ್ರೆಸ್ ಶಾಸಕರಾದ ಲಕ್ಷ್ಮೀನಾರಾಯಣನ್ ಮತ್ತು ಡಿಎಂಕೆ ಶಾಸಕ ವೆಂಕಟೇಶನ್ ಅವರ ರಾಜೀನಾಮೆಯಿಂದ ಅಲ್ಪಮತಕ್ಕೆ ಕುಸಿದಿದ್ದ ಮುಖ್ಯಮಂತ್ರಿ ನಾರಾಯಣಸ್ವಾಮಿ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿಶ್ವಾಸಮತ ಯಾಚನೆಯಲ್ಲಿ ವಿಫಲವಾಗಿದ್ದು ಸರ್ಕಾರ ಪತನಗೊಂಡಿದೆ.
ಪಂಚಮಸಾಲಿ ಮೀಸಲಾತಿ ಹೋರಾಟ: ಸಚಿವರೇ ಉತ್ತರ ನೀಡುತ್ತಾರೆ ಎಂದ ಸಿಎಂ
ಇಂದು ನಡೆದ ವಿಶೇಷ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರ ಬಹುಮತ ಕಳೆದುಕೊಂಡಿದೆ ಎಂದು ಸ್ಪೀಕರ್ ಹೇಳುತ್ತಿದ್ದಂತೆಯೇ ವಿಧಾನಸಭೆಯಿಂದ ಮುಖ್ಯಮಂತ್ರಿ ನಾರಾಯಣಸ್ವಾಮಿ ಮತ್ತು ಕಾಂಗ್ರೆಸ್ ಸದಸ್ಯರು ಸದನದಿಂದ ಹೊರ ನಡೆದರು.
ಶಾಸಕರಾದ ಎ.ಜಾನ್ ಕುಮಾರ್, ಲಕ್ಷ್ಮೀ ನಾರಾಯಣ ಮತ್ತು ವೆಂಕಟೇಶನ್ ರಾಜೀನಾಮೆಯಿಂದ ಪುದುಚೇರಿ ಸರ್ಕಾರದಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗಿತ್ತು. 33 ಶಾಸಕರನ್ನು ಹೊಂದಿದ್ದ ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರ ಬಲ 11ಕ್ಕೆ ಕುಸಿದಿತ್ತು. ವಿಪಕ್ಷದ ಬಲ 14ರಷ್ಟಿತ್ತು. ಈ ಹಿನ್ನೆಲೆಯಲ್ಲಿ ಫೆ.22ರೊಳಗೆ ಬಹುಮತ ಸಾಬೀತು ಪಡಿಸುವಂತೆ ಲೆಫ್ಟಿನೆಂಟ್ ಗವರ್ನರ್ ತಮಿಳ್ ಸಾಯಿ ಸಿಎಂ ನಾರಾಯಣಸ್ವಾಮಿಗೆ ಸೂಚಿಸಿದ್ದರು.