ಕೊಯಮತ್ತೂರು: ಹದಿಮೂರೂವರೆ ತಾಸಿನಲ್ಲಿ 6055 ಚದರ ಅಡಿ ಚಿತ್ರ ಬಿಡಿಸುವ ಮೂಲಕ ಕೊಯಮತ್ತೂರು ಪದವಿ ವಿದ್ಯಾರ್ಥಿನಿ ಗಿನ್ನೆಸ್ ವಿಶ್ವದಾಖಲೆಗೆ ಅರ್ಹಳಾಗಿದ್ದಾಳೆ.
ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿನಿ ಆರ್. ಮೊನಿಷಾ ಸ್ಕಾಟಿಷ್ ಕಲಾವಿದ ಜೋಹಾನ್ ಬೋಸ್ ಫೋರ್ಡ್ ಅವರ ದಾಖಲೆ ಮುರಿದಿದ್ದಾಳೆ.
ಜೋಹಾನ್ 12 ತಾಸಿನಲ್ಲಿ 5,391 ಚದರ ಅಡಿ ಚಿತ್ರ ಬಿಡಿಸಿ 2019 ರ ನವೆಂಬರ್ ನಲ್ಲಿ ದಾಖಲೆ ಬರೆದಿದ್ದರು.
ಮೊನಿಷಾ ಶನಿವಾರ ಬೆಳಗ್ಗೆ 7.30 ಕ್ಕೆ ಚಿತ್ರ ಬಿಡಿಸಲು ಕುಳಿತವಳು, ರಾತ್ರಿ 9 ಗಂಟೆಯವರೆಗೆ 6055 ಅಡಿ ಚಿತ್ರ ಬಿಡಿಸಿದ್ದಾಳೆ.
ನಗರದ ನಾಲ್ವರು ಕಲಾ ಶಿಕ್ಷಕರು ಇದಕ್ಕೆ ಸಾಕ್ಷಿಯಾಗಿದ್ದು, ಚಿತ್ರ ರಚನೆಯ ಸಂಪೂರ್ಣ ವಿಡಿಯೋ ರೆಕಾರ್ಡ್ ಮಾಡಿ ಗಿನ್ನೆಸ್ ರೆಕಾರ್ಡ್ ಬುಕ್ ಗೆ ಕಳಿಸಲಾಗಿದೆ. ಗಿನ್ನೆಸ್ ನಿಯಮಾವಳಿಯಂತೆ ಪ್ರತಿ ಎರಡು ತಾಸಿಗೆ 10 ನಿಮಿಷ ಬಿಡುವು ಪಡೆಯಲು ಅವಕಾಶವಿದೆ. ಅದರಂತೆ ಮೊನಿಷಾ ಸಹ ಬಿಡುವು ಪಡೆದಿದ್ದಳು. “ನಾನು 15 ಅಕ್ರಿಲಿಕ್ ಕಲರ್ ಮಾರ್ಕರ್ ಹಾಗೂ 100 ಮೀಟರ್ ಪೇಪರ್ ರೋಲ್ ನೆಲಕ್ಕೆ ಹಾಸಿ ಅದರ ಮೇಲೆ ಚಿತ್ರ ರಚಿಸಿದೆ” ಎಂದು ಮೊನಿಷಾ ಹೇಳಿದ್ದಾರೆ.