ದುಬೈನಿಂದ ಕೇರಳದ ಕೋಯಿಕ್ಕೋಡ್ ಗೆ ಬಂದಿಳಿಯುವ ವೇಳೆಗೆ ಅಪಘಾತಕ್ಕೀಡಾದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿದ್ದ ಸಹ ಪೈಲೆಟ್ ಸಾವು ನಿಜಕ್ಕೂ ಯಾತನಾಮಯ ಮತ್ತು ದುರಂತ.
ಪತ್ನಿ 9 ತಿಂಗಳ ಗರ್ಭಿಣಿ. 15 – 20 ದಿನದಲ್ಲಿ ಪ್ರಸವ ಆಗುವ ದಿನಾಂಕವನ್ನು ವೈದ್ಯರು ನಿಗದಿಪಡಿಸಿದ್ದರು. ಆದರೆ, ಮಗು ಹುಟ್ಟುವ ಮೊದಲೇ ಸಹ ಪೈಲೆಟ್ ದುರಂತ ಸಾವಿಗೀಡಾಗಿದ್ದಾರೆ.
ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ, ಪ್ರಸವದ ದಿನಾಂಕ ಎದುರು ನೋಡುತ್ತಿದ್ದ ಗರ್ಭಿಣಿ ಪತ್ನಿಯ ಜೊತೆ ಸಹ ಪೈಲೆಟ್ ಅಖಿಲೇಶ್ ಕುಮಾರ್ ಇರಬೇಕಿತ್ತು. ಹುಟ್ಟುವ ಮಗುವಿನ ನಗುಮೊಗ ನೋಡಬೇಕು, ಮೊದಲ ಅಳು ಕೇಳಬೇಕೆಂಬ ಆನಂದತುಂದಿಲರಾಗಿದ್ದರು. ಆದರೆ, ವಿಧಿ ಎಷ್ಟು ಕ್ರೂರವಾಗಿಬಿಟ್ಟಿತು ಎಂದರೆ, ಮಗು ಕಣ್ಣು ಬಿಡುವ ಮೊದಲೇ ಅಖಿಲೇಶ್ ಕಣ್ಣು ಮುಚ್ಚಿದರು.
ಈ ಕುರಿತು ದುಃಖ ಹಂಚಿಕೊಂಡಿರುವ ಅವರ ಸಹೋದರ ಬಸುದೇವ್, 2017 ರಲ್ಲಿ ಅಖಿಲೇಶ್ ಸಹ ಪೈಲೆಟ್ ಆಗಿ ಏರ್ ಇಂಡಿಯಾ ಸೇರಿದ್ದರು. 2018 ರ ಡಿಸೆಂಬರ್ ನಲ್ಲಿ ವಿವಾಹವಾಗಿತ್ತು. ಲಾಕ್ ಡೌನ್ ಗೂ ಮೊದಲು ಮನೆಗೆ ಬಂದಿದ್ದ. ಕೆಲ ದಿನಗಳಷ್ಟೇ ಮನೆಯಲ್ಲಿ ಇದ್ದು. ಮತ್ತೆ ಕರ್ತವ್ಯದ ಕರೆ ಓಗೊಟ್ಟು ಹೋದವನು, ಕಾಲನ ಕರೆಗೇ ಓಗೊಟ್ಟು ಹೊರಟುಬಿಟ್ಟ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.