ಮಹಾರಾಷ್ಟ್ರ ಎಸ್ಎಸ್ಸಿ, ಹೆಚ್ಎಸ್ಸಿ ಬೋರ್ಡ್ ಪರೀಕ್ಷೆ : ಮಹಾರಾಷ್ಟ್ರದಲ್ಲಿ ಈ ವರ್ಷ ಎಸ್ಎಸ್ಸಿ ಹಾಗೂ ಹೆಚ್ಎಸ್ಸಿ ಬೋರ್ಡ್ ಪರೀಕ್ಷೆಗಳನ್ನ ಮುಂದೂಡಲಾಗಿದೆ ಅಂತಾ ಮಹಾರಾಷ್ಟ್ರ ಶಿಕ್ಷಣ ಸಚಿವ ವರ್ಷಾ ಗಾಯಕ್ವಾಡ್ ಘೋಷಣೆ ಮಾಡಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ 12ನೇ ತರಗತಿ ಪರೀಕ್ಷೆ ಮೇ ತಿಂಗಳಾಂತ್ಯದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. 10ನೇ ತರಗತಿ ಪರೀಕ್ಷೆ ಜೂನ್ ತಿಂಗಳಲ್ಲಿ ನಡೆಯಲಿದೆ ಎಂದು ವರ್ಷಾ ಹೇಳಿದ್ದಾರೆ.
ಉತ್ತರ ಪ್ರದೇಶ ಬೋರ್ಡ್ ಎಕ್ಸಾಂ : ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ 10 ಹಾಗೂ 12ನೇ ತರಗತಿಯ ಪರೀಕ್ಷೆಗಳನ್ನ ಮುಂದೂಡಿದೆ. ಸಿಎಂ ನೇತೃತ್ವದಲ್ಲಿ ಸಭೆ ನಡೆದ ಬಳಿಕ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ಉನ್ನತ ಮೂಲಗಳು ತಿಳಿಸಿವೆ.
ಗುಜರಾತ್ : ಗುಜರಾತ್ ಸರ್ಕಾರ ಕೂಡ ಮೇ 10 ರಿಂದ 25ರೊಳಗೆ ನಡೆಯಬೇಕಿದ್ದ 10 ಹಾಗೂ 12ನೇ ತರಗತಿ ಪರೀಕ್ಷೆಗಳನ್ನ ಮುಂದೂಡಿದೆ. ಪರಿಷ್ಕೃತ ವೇಳಾಪಟ್ಟಿಯನ್ನ ಮೇ 15ರಂದು ಘೋಷಣೆ ಮಾಡಲಾಗುತ್ತೆ ಎಂದು ಶಿಕ್ಷಣ ಮಂಡಳಿ ತಿಳಿಸಿದೆ.
ಇದು ಮಾತ್ರವಲ್ಲದೇ 1 ರಿಂದ 9 ಹಾಗೂ 11 ನೇ ತರಗತಿ ಮಕ್ಕಳನ್ನ ಪರೀಕ್ಷೆ ಇಲ್ಲದೇ ಪಾಸ್ ಮಾಡೋದಾಗಿ ಹೇಳಿದೆ.
ಹರಿಯಾಣ : ಹರಿಯಾಣ ಸರ್ಕಾರವು 10ನೇ ತರಗತಿ ಬೋರ್ಡ್ ಪರೀಕ್ಷೆಯನ್ನ ರದ್ದು ಮಾಡಿದೆ. ಅಲ್ಲದೇ 12 ತರಗತಿ ಪರೀಕ್ಷೆಯನ್ನ ಮುಂದೂಡಿದೆ.
ರಾಜಸ್ಥಾನ : ಸಿಬಿಎಸ್ಇ ಘೋಷಣೆ ಬಳಿಕ ಆರ್ಬಿಎಸ್ಇ ಕೂಡ 10 ಹಾಗೂ 12 ನೇ ತರಗತಿ ಪರೀಕ್ಷೆಗಳನ್ನ ಮುಂದೂಡಿದೆ. ಕೋವಿಡ್ 19 ಹಾಟ್ಸ್ಪಾಟ್ ಪ್ರದೇಶಗಳಲ್ಲಿ 12ನೇ ತರಗತಿಯ ಪ್ರ್ಯಾಕ್ಟಿಕಲ್ ಪರೀಕ್ಷೆಗಳನ್ನೂ ರದ್ದು ಮಾಡಲಾಗಿದೆ.
ಮಧ್ಯ ಪ್ರದೇಶ : ಮಧ್ಯ ಪ್ರದೇಶ ಸರ್ಕಾರ 10 ಹಾಗೂ 12ನೇ ತರಗತಿ ಪರೀಕ್ಷೆಗಳನ್ನ ಒಂದು ತಿಂಗಳ ಮಟ್ಟಿಗೆ ಮುಂದೂಡಿದೆ.
ಪಂಜಾಬ್ : ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ 5, 8 ಹಾಗೂ 10ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಇಲ್ಲದೇ ಮುಂದಿನ ತರಗತಿಗೆ ಬಡ್ತಿ ಹೊಂದಿದ್ದಾರೆ ಎಂದು ಹೇಳಿದ್ದಾರೆ. 12ನೇ ತರಗತಿ ಪರೀಕ್ಷೆಗಳನ್ನೂ ಮುಂದೂಡಲಾಗಿದ್ದು ಕೊರೊನಾ ಪರಿಸ್ಥಿತಿ ನೋಡಿ ವೇಳಾಪಟ್ಟಿ ಹೊರಡಿಸಲಾಗುತ್ತೆ ಎಂದು ಹೇಳಿದ್ದಾರೆ.
ಒಡಿಶಾ : ಕೊರೊನಾ ಎರಡನೆ ಅಲೆ ಹಿನ್ನೆಲೆ ಒಡಿಶಾದಲ್ಲಿ 10 ಹಾಗೂ 12ನೇ ತರಗತಿ ಪರೀಕ್ಷೆಗಳು ಮುಂದೂಡಿಕೆಯಾಗಿವೆ.
ತೆಲಂಗಾಣ : 10ನೇ ತರಗತಿ ಪರೀಕ್ಷೆ ರದ್ದು ಹಾಗೂ 12ನೇ ತರಗತಿ ಪರೀಕ್ಷೆಗಳನ್ನ ಮುಂದೂಡಲಾಗಿದೆ.
ಜಮ್ಮು & ಕಾಶ್ಮೀರ : ಜಮ್ಮು ಕಾಶ್ಮೀರದ ಲೆ. ಗವರ್ನರ್ ಕಚೇರಿಯು ಸದ್ಯ ನಡೆಯುತ್ತಿದ್ದ 10ನೇ ತರಗತಿ ಪರೀಕ್ಷೆಯನ್ನ ರದ್ದು ಮಾಡಿದೆ. ಹಾಗೂ ನಡೆಯುತ್ತಿದ್ದ 12ನೇ ತರಗತಿ ಪರೀಕ್ಷೆಗಳನ್ನ ಮುಂದೂಡಿದೆ. ಆಂತರಿಕ ಪರೀಕ್ಷೆಗಳನ್ನ ಗಮನದಲ್ಲಿರಿಸಿ 10ನೇ ತರಗತಿ ಮಕ್ಕಳು 11ನೇ ತರಗತಿಗೆ ಬಡ್ತಿ ಹೊಂದಲಿದ್ದಾರೆ.
ಇನ್ನು ಕರ್ನಾಟಕ ಹಾಗೂ ಆಂಧ್ರ ಪ್ರದೇಶ ಸರ್ಕಾರ ಇಲ್ಲಿಯವರೆಗೆ ಪರೀಕ್ಷಾ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ನಿಗದಿತ ದಿನಾಂಕದಂದೇ ಪರೀಕ್ಷೆಗಳನ್ನ ನಡೆಸೋದಾಗಿ ಹೇಳಿವೆ.